ಸಾರಾಂಶ
ಸೆಪ್ಟೆಂಬರ್‌ನಲ್ಲಿ ಹಿಜ್ಬುಲ್ಲಾ ಉಗ್ರರ ಮೇಲೆ ನಡೆದ ಪೇಜರ್ ಹಾಗೂ ವಾಕಿಟಾಕಿ ದಾಳಿಯಲ್ಲಿ ಇಸ್ರೇಲ್ ಪಾತ್ರವಿರುವ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಜೆರುಸಲೇಂ: ಸೆಪ್ಟೆಂಬರ್‌ನಲ್ಲಿ ಹಿಜ್ಬುಲ್ಲಾ ಉಗ್ರರ ಮೇಲೆ ನಡೆದ ಪೇಜರ್ ಹಾಗೂ ವಾಕಿಟಾಕಿ ದಾಳಿಯಲ್ಲಿ ಇಸ್ರೇಲ್ ಪಾತ್ರವಿರುವ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಾತನಾಡಿದ ನೆತನ್ಯಾಹು, ‘ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳ ವಿರೋಧದ ನಡುವೆಯೂ ಪೇಜರ್ ಸ್ಫೋಟ ಹಾಗೂ ಹಿಜ್ಬುಲ್ಲಾ ಮುಖ್ಯಸ್ಥನಾಗಿದ್ದ ಹಸನ್ ನಸ್ರಲ್ಲಾನನ್ನು ಹತ್ಯೆಗೈದೆವು’ ಎಂದು ಹೇಳಿರುವುದಾಗಿ ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.ಒಂದೇ ದಿನದ ಅಂತರದಲ್ಲಿ ಲೆಬನಾನ್ ಹಾಗೂ ಸಿರಿಯಾದ ಕೆಲ ಭಾಗಗಳಲ್ಲಿದ್ದ ಹಿಜ್ಬುಲ್ಲಾ ಉಗ್ರರು ಸಂವಹನೆಗಾಗಿ ಬಳಸುತ್ತಿದ್ದ ಸಾವಿರಾರು ಪೇಜರ್‌ಗಳು ಹಾಗೂ ವಾಕಿಟಾಕಿಗಳು ಸ್ಫೋಟಗೊಂಡು 39 ಜನರ ಸಾವಿಗೆ ಕಾರಣವಾಗಿತ್ತು. ಸಾವಿರಾರು ಹಿಜ್ಬುಲ್ಲಾ ಉಗ್ರರು ಗಾಯಗೊಂಡಿದ್ದಸರು. ಈ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಶಂಕಿಸಲಾಗಿತ್ತಾದರೂ, ಈವರೆಗೆ ಇಸ್ರೇಲ್ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ.
ರಕ್ಷಣಾ ಸಚಿವ ಯೋ ಗ್ಯಾಲೆಂಟ್ ಅವರ ಪದಚ್ಯುತಿಯ ಬೆನ್ನಲ್ಲೇ ಹೀಗೆ ಹೇಳುವ ಮೂಲಕ ದಾಳಿಯ ಶ್ರೇಯವನ್ನು ನೆತನ್ಯಾಹು ತಮ್ಮದಾಗಿಸಿಕೊಳ್ಳಲು ಬಯಸುತ್ತಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.