ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ಟಾಡೆಕ್ಸ್‌ ನೌಕೆಗಳ ಅನ್‌ಡಾಕಿಂಗ್‌ ಯಶಸ್ವಿ

| N/A | Published : Mar 14 2025, 12:32 AM IST / Updated: Mar 14 2025, 07:11 AM IST

ಸಾರಾಂಶ

  ಇತ್ತೀಚೆಗಷ್ಟೇ ಎರಡು ಸ್ಪೇಡೆಕ್ಸ್‌ ನೌಕೆಗಳ ಡಾಕಿಂಗ್‌ (ಜೋಡುವಿಕೆ) ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರೆವೇರಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದೀಗ ನೌಕೆಗಳ ಅನ್‌ಡಾಕಿಂಗ್‌ (ಬೇರ್ಪಡುವಿಕೆ) ಪ್ರಕ್ರಿಯೆಯನ್ನೂ ಯಶಸ್ವಿಯಾಗಿ ನಡೆಸಿದೆ.

ನವದೆಹಲಿ: ಇತ್ತೀಚೆಗಷ್ಟೇ ಎರಡು ಸ್ಪೇಡೆಕ್ಸ್‌ ನೌಕೆಗಳ ಡಾಕಿಂಗ್‌ (ಜೋಡುವಿಕೆ) ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರೆವೇರಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದೀಗ ನೌಕೆಗಳ ಅನ್‌ಡಾಕಿಂಗ್‌ (ಬೇರ್ಪಡುವಿಕೆ) ಪ್ರಕ್ರಿಯೆಯನ್ನೂ ಯಶಸ್ವಿಯಾಗಿ ನಡೆಸಿದೆ.

ಭವಿಷ್ಯದ ಮಾನವಸಹಿತ ಗಗನಯಾನ, ಚಂದ್ರಯಾನ 4 ಮತ್ತು ತನ್ನದೇ ಆದ ಅಂತರಿಕ್ಷ ಕೇಂದ್ರ ನಿರ್ಮಾಣದ ಇಸ್ರೋದ ಕನಸಿಗೆ ಈ ಬೆಳವಣಿಗೆ ಮತ್ತಷ್ಟು ಬಲತುಂಬಿದೆ.

ಬಾಹ್ಯಾಕಾಶದಲ್ಲಿ ಪರಸ್ಪರ ಜೋಡಣೆಯಾಗಿದ್ದ ಎಸ್‌ಡಿಎಕ್ಸ್‌ 1 ಮತ್ತು ಎಸ್‌ಡಿಎಕ್ಸ್‌ 2 ನೌಕೆಗಳನ್ನು ಪರಸ್ಪರ ಜೋಡಿಸಿದ್ದ ಸಲಕರಣೆಗಳನ್ನು ಪ್ರತ್ಯೇಕಗೊಳ್ಳುವಂತೆ ಸಂದೇಶ ರವಾನಿಸಲಾಗಿತ್ತು. ಅದರಂತೆ ಎರಡೂ ನೌಕೆಗಳು ಯಶಸ್ವಿಯಾಗಿ ಪ್ರತ್ಯೇಕಗೊಂಡಿವೆ. ಇದೀಗ ಎರಡೂ ನೌಕೆಗಳು ಪ್ರತ್ಯೇಕವಾಗಿ ತಮ್ಮ ಕಕ್ಷೆಯಲ್ಲಿ ಚಲಿಸುತ್ತಿವೆ. ಅವುಗಳ ಕಾರ್ಯನಿರ್ವಹಣೆ ಸಾಮಾನ್ಯವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇಸ್ರೋ, ಕಳೆದ ವರ್ಷ ಡಿ.30ರಂದು ಎರಡು ನೌಕೆಗಳಾದ ಎಸ್‌ಡಿಎಕ್ಸ್‌ 1, ಎಸ್‌ಡಿಎಕ್ಸ್‌ 02 ಅನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಿತ್ತು. ಹಲವು ಪ್ರಯತ್ನಗಳ ಬಳಿಕ ಜ.16ರಂದು ಎರಡು ಉಪಗ್ರಹಗಳನ್ನು ಜೋಡಿಸುವಲ್ಲಿ(ಡಾಕಿಂಗ್‌) ಇಸ್ರೋ ಯಶಸ್ವಿಯಾಗಿತ್ತು. ಈ ಮೂಲಕ ಈ ರೀತಿಯ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಗೌರವಕ್ಕೆ ಭಾರತ ಪಾತ್ರವಾಗಿತ್ತು.

ಅಯುಷ್ಮಾನ್ ವಿಮೆ ಸೇರ್ಪಡೆ ಮಿತಿ 60 ವರ್ಷಕ್ಕಿಳಿಸಲು ಸಮಿತಿ ಸಲಹೆ

ನವದೆಹಲಿ: 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡುವ ಆಯುಷ್ಮಾರ್ಣರ್ ವಯ ವಂದನಾ ಕಾರ್ಡ್‌ ಸೇರ್ಪಡೆ ವಯೋಮಿತಿಯನ್ನು 60 ವರ್ಷಕ್ಕೆ ಇಳಿಸಬೇಕು ಎಂದು ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಬುಧವಾರ ರಾಜ್ಯಸಭೆಯಲ್ಲಿ ಈ ಕುರಿತು ವರದಿ ಮಂಡಿಸಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಪ್ರಸ್ತುತವಿರುವ 5 ಲಕ್ಷ ರು.ಗಳಿಂದ 10 ಲಕ್ಷ ರು.ಗಳವರೆಗೆ ಪರಿಷ್ಕರಿಸಲು ಶಿಫಾರಸ್ಸು ಮಾಡಿದೆ. ಇದರ ಜೊತೆಗೆ ಸಾಮಾನ್ಯ ಜನರ ಹಿತದೃಷ್ಟಿಯಿಂದ ಯೋಜನೆಯ ವ್ಯಾಪ್ತಿ ವಿಸ್ತರಿಸಲು ಆಯುಷ್ಮಾನ್‌ ವೇ ವಂದನಾ ಕಾರ್ಡ್‌ಗಳಿಗೆ 70 ವರ್ಷದಿಂದ 60 ವರ್ಷಕ್ಕೆ ಇಳಿಕೆ ಮಾಡಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.ಸರ್ಕಾರ ಆಯುಷ್ಮಾನ್ ಯೋಜನೆಯಡಿ 4.5 ಕೋಟಿ ಕುಟುಂಬಗಳ 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ 6 ಕೋಟಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೇವೆ ನೀಡುವ ಯೋಜನೆ ಘೋಷಿಸಿತ್ತು.

ಬಂಗಾಳದಲ್ಲೀಗ 40% ಮುಸ್ಲಿಮರು: ಎಲ್ಲಾ ಕಡೆ ನಮ್ಮ ಸ್ಪರ್ಧೆ: ಎಂಐಎಂ

ನವದೆಹಲಿ: ‘ಪ್ರಸ್ತುತ ಪಶ್ಚಿಮ ಬಂಗಾಳದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ.40ಕ್ಕೆ ಏರಿದೆ. ಹೀಗಾಗಿ 2026ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ’ ಎಂದು ಅಸಾಸುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷ ಘೋಷಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಇಮ್ರಾನ್‌ ಸೋಲಂಕಿ, ‘ನಾವು ಈಗಾಗಲೇ ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ ಹಾಗೂ ದೆಹಲಿಯಲ್ಲಿ ಸ್ಪರ್ಧಿಸಿದ್ದೇವೆ. ಈ ಬಾರಿ ಪಶ್ಚಿಮ ಬಂಗಾಳದ ಎಲ್ಲಾ ಸ್ಥಾನಗಳಿಂದ ಕಣಕ್ಕಿಳಿಯುತ್ತೇವೆ’ ಎಂದರು.ಈ ವೇಳೆ ಅಧಿಕಾರದಲ್ಲಿರುವ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಸೋಲಂಕಿ, ‘ಶೇ.90ರಷ್ಟು ಮುಸ್ಲಿಮರ ಮತದಿಂದಲೇ ಅಧಿಕಾರಕ್ಕೇರಿರುವ ಅವರು ಆ ಸಮುದಾಯಕ್ಕಾಗಿ ಏನೂ ಮಾಡಲಿಲ್ಲ’ ಎಂದು ಕಿಡಿಕಾರಿದರು.