ಸಾರಾಂಶ
ಬೆಂಗಳೂರು : ರಾಕೆಟ್ ಉಡಾವಣೆ ವೆಚ್ಚವನ್ನು ಅಪಾರ ಪ್ರಮಾಣದಲ್ಲಿ ತಗ್ಗಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ನಡೆಸುತ್ತಿರುವ ಮರುಬಳಕೆಯ ರಾಕೆಟ್ ಪ್ರಯೋಗ ಸತತ 3ನೇ ಬಾರಿಯೂ ಯಶಸ್ವಿಯಾಗಿದೆ. ಮರುಬಳಕೆಯ ಉಡ್ಡಯನ ವಾಹಕ ‘ಪುಷ್ಪಕ್’ ಪ್ರಯೋಗ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಭಾನುವಾರ ಮುಂಜಾನೆ 7.10ಕ್ಕೆ ಸುಸೂತ್ರವಾಗಿ ನಡೆದಿದೆ.
ಅತ್ಯಂತ ಕ್ಲಿಷ್ಟಕರವಾದ ಸವಾಲಿನ ಸನ್ನಿವೇಶಗಳಲ್ಲಿ ‘ಪುಷ್ಪಕ್’ ಸ್ವಯಂಚಾಲಿತವಾಗಿ ಲ್ಯಾಂಡ್ ಆಗುವ ಸಾಮರ್ಥ್ಯ ಪರೀಕ್ಷಿಸುವ ಉದ್ದೇಶದಿಂದ ಈ ಪ್ರಯೋಗವನ್ನು ಕೇಂದ್ರೀಕರಿಸಲಾಗಿತ್ತು. ಅದು ಯಶಸ್ವಿಯಾಗಿದೆ.
ವಿಮಾನದ ರೀತಿ ರೆಕ್ಕೆಗಳನ್ನು ಹೊಂದಿರುವ ‘ಪುಷ್ಪಕ್’ ವಾಹಕವನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಭೂಮಿಯಿಂದ 4.5 ಕಿ.ಮೀ. ಎತ್ತರಕ್ಕೆ ಒಯ್ಯಲಾಯಿತು. ಬಳಿಕ ರನ್‌ವೇಯಿಂದ 4.5 ಕಿ.ಮೀ. ಎತ್ತರದಲ್ಲಿರುವಾಗ ಅದನ್ನು ಕೆಳಕ್ಕೆ ಬಿಡಲಾಯಿತು. ಪುಷ್ಪಕ್ ಸ್ವಯಂಚಾಲಿತವಾಗಿ ತನ್ನ ಮಾರ್ಗವನ್ನು ಸರಿಪಡಿಸಿಕೊಂಡು, ರನ್‌ವೇಯನ್ನು ಸಮೀಪಿಸಿತು. ರನ್‌ವೇಯ ಕೇಂದ್ರಪಥದಲ್ಲಿ ಅತ್ಯಂತ ನಿಖರವಾಗಿ ಲ್ಯಾಂಡ್ ಆಯಿತು. ಕೂಡಲೇ ಬ್ರೇಕ್ ಪ್ಯಾರಾಶೂಟ್‌ಗಳನ್ನು ಬಳಸಿ ವೇಗವನ್ನು ಗಂಟೆಗೆ 100 ಕಿ.ಮೀ.ಗೆ ತಗ್ಗಿಸಿತು. ನಂತರ ಗೇರ್ ಬ್ರೇಕ್‌ಗಳನ್ನು ಬಳಸಿ ರನ್‌ವೇಯಲ್ಲಿ ನಿಂತಿತು.
ಲ್ಯಾಂಡ್ ಆಗುವಾಗ ಪುಷ್ಪಕ್‌ನ ವೇಗ ಗಂಟೆಗೆ 320 ಕಿ.ಮೀ. ಇತ್ತು. ಸಾಮಾನ್ಯವಾಗಿ ಪ್ರಯಾಣಿಕ ವಿಮಾನಗಳ ಲ್ಯಾಂಡಿಂಗ್ ವೇಳೆ ಅವುಗಳ ವೇಗ 260 ಕಿ.ಮೀ. ಇದ್ದರೆ, ಯುದ್ಧ ವಿಮಾನಗಳ ವೇಗ 280 ಕಿ.ಮೀ. ಇರುತ್ತದೆ.
;Resize=(128,128))