ಅಮೆರಿಕ ದೈತ್ಯ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು : ಶ್ರೀಹರಿಕೋಟದಿಂದ ಈ ಉಪಗ್ರಹ ನಭಕ್ಕೆ

| Published : Jan 03 2025, 12:31 AM IST / Updated: Jan 03 2025, 04:52 AM IST

ಸಾರಾಂಶ

 ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೋ, ಇದೇ ಮೊದಲ ಬಾರಿಗೆ ಅಮೆರಿಕದ ದೈತ್ಯ ಸಂವಹನ ಉಪಗ್ರಹ ಉಡ್ಡಯನಕ್ಕೆ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಶ್ರೀಹರಿಕೋಟದಿಂದ ಈ ಉಪಗ್ರಹ ನಭಕ್ಕೆ ಹಾರಲಿದೆ.

ನವದೆಹಲಿ: ವಾಣಿಜ್ಯ ಉಪಗ್ರಹ ಉಡ್ಡಯನ ವಲಯದಲ್ಲಿ ವಿಶ್ವದಲ್ಲೇ ಮುಂಚೂಣಿ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೋ, ಇದೇ ಮೊದಲ ಬಾರಿಗೆ ಅಮೆರಿಕದ ದೈತ್ಯ ಸಂವಹನ ಉಪಗ್ರಹ ಉಡ್ಡಯನಕ್ಕೆ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಶ್ರೀಹರಿಕೋಟದಿಂದ ಈ ಉಪಗ್ರಹ ನಭಕ್ಕೆ ಹಾರಲಿದೆ.

ಇದುವರೆಗೆ ಅಮೆರಿಕ ಸೇರಿ ಹಲವು ದೇಶಗಳ ಸಣ್ಣಪುಟ್ಟ ಉಪಗ್ರಹಗಳನ್ನು ಹಾರಿಸಿದ ಇತಿಹಾಸವನ್ನು ಇಸ್ರೋ ಹೊಂದಿತ್ತು. ಆದರೆ ಬಾಹ್ಯಾಕಾಶ ಕ್ಷೇತ್ರದಲ್ಲೇ ಮುಂಚೂಣಿ ದೇಶವಾದ ಅಮೆರಿಕದ ಖಾಸಗಿ ಕಂಪನಿಯೊಂದರ ಬೃಹತ್‌ ಸಂವಹನ ಉಪಗ್ರಹ ಉಡ್ಡಯನದ ಅವಕಾಶ ಇಸ್ರೋಕ್ಕೆ ಸಿಕ್ಕಿರುವುದು ಇದೇ ಮೊದಲು.

ಈ ಉಪಗ್ರಹದ ವಿಶೇಷವೆಂದರೆ, ಇದನ್ನು ಬಳಸಿಕೊಂಡು ಯಾವುದೇ ಟವರ್‌ಗಳ ಅಗತ್ಯವಿಲ್ಲದೇ ನೇರವಾಗಿ ಮೊಬೈಲ್‌ ಕರೆ ಮಾಡಬಹುದಾಗಿದೆ. ಜೊತೆಗೆ ಬಾಹ್ಯಾಕಾಶಕ್ಕೂ ಮೊಬೈಲ್‌ ಸಂಪರ್ಕ ಸಾಧ್ಯವಾಗಲಿದೆ.

ಈ ಕುರಿತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಮಾಹಿತಿ ನೀಡಿದ್ದು, ‘ಮೊಬೈಲ್‌ ಮೂಲಕ ಬಾಹ್ಯಾಕಾಶದಲ್ಲಿ ಸಂವಹನವನ್ನು ಸಾಧ್ಯವಾಗಿಸುವ ಉಪಗ್ರಹವನ್ನು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಉಡಾವಣೆ ಮಾಡಲಾಗುವುದು. ಇದು ಕುತೂಹಲಕಾರಿ ಮಿಷನ್‌ ಆಗಿರಲಿದೆ’ ಎಂದಿದ್ದಾರೆ.

ಅಮೆರಿಕ ಕಂಪನಿ:

ಬ್ಲ್ಯೂಬರ್ಡ್‌ ಹೆಸರಿನ ಈ ಉಪಗ್ರಹವನ್ನು ಟೆಕ್ಸಾಸ್‌ ಮೂಲದ ಎಎಸ್‌ಟಿ ಸ್ಪೇಸ್‌ ಮೊಬೈಲ್‌ ಕಂಪನಿ ತಯಾರಿಸಿದೆ. ಉಪಗ್ರಹ ಬಾಹ್ಯಾಕಾಶಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಭೂಮಿಯ ಯಾವುದೇ ಭಾಗಕ್ಕೆ ಸುಲಭವಾಗಿ ಮೊಬೈಲ್‌ ಕರೆ ಸಾಧ್ಯವಾಗಲಿದೆ. ಯಾವುದೇ ವಿಶೇಷ ಉಪಕರಣ ಬಳಸದೇ ಮೊಬೈಲ್‌ನಿಂದಲೇ ಇಂಥ ಕರೆ ಸಾಧ್ಯವಾಗಲಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಬಳಸಿ ಬಾಹ್ಯಾಕಾಶದಿಂದ ಭೂಮಿಗೆ ಕೂಡಾ ಕರೆ ಮಾಡಬಹುದು ಎಂದು ಕಂಪನಿ ಹೇಳಿದೆ. ಈ ಉಪಗ್ರಹ 6000 ಕೆಜಿ ತೂಕ ಹೊಂದಿದ್ದು, 64 ಚದರ ಮೀಟರ್‌ನಷ್ಟು ವಿಸ್ತೀರ್ಣದ ಅಂದರೆ ಫುಟ್ಬಾಲ್‌ ಮೈದಾನದ ಅರ್ಧ ಗಾತ್ರದ ಆ್ಯಂಟೆನಾವನ್ನು ಹೊಂದಿರಲಿದೆ ಎನ್ನಲಾಗಿದೆ.

ಈ ಉಪಗ್ರಹ ಕಾರ್ಯಾಚರಣೆ ಯಶಸ್ವಿಯಾದರೆ ಭೂಮಿಯ ಯಾವುದೇ ಕುಗ್ರಾಮಗಳಿಗೂ ಗುಣಮಟ್ಟದ 5ಜಿ ಸೇವೆ ನೀಡಬಹುದಾಗಿದೆ. ಜೊತೆಗೆ ಇಂಥ ಸಂಪರ್ಕವು ಅತ್ಯಂತ ದುರ್ಗಮ ಪ್ರದೇಶಗಳಿಗೂ ಗುಣಮಟ್ಟದ ಶಿಕ್ಷಣ, ವೈದ್ಯಕೀಯ ಸೇವೆ ನೀಡಲು ಅನುವು ಮಾಡಿಕೊಡಲಿದೆ. ಜೊತೆಗೆ ಪ್ರತಿ ನಾಗರಿಕರಿಗೂ ಡಿಜಿಟಲ್‌ ಸೇವೆಗಳನ್ನು ನೀಡಲು ಸಾಧ್ಯ ಮಾಡಿಕೊಡಲಿದೆ.

ಪ್ರಸಕ್ತ ಎಲಾನ್‌ ಮಾಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಬಾಹ್ಯಾಕಾಶದಲ್ಲಿ ಸಾಲಾಗಿ ನೂರಾರು ಉಪಗ್ರಹಗಳನ್ನು ಕೂರಿಸಿ ಇಂಥದ್ದೇ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವೆ ನೀಡುತ್ತಿದೆ. ಹೀಗಾಗಿ ಬ್ಲ್ಯೂಬರ್ಡ್‌ ಉಪಗ್ರಹ, ಮಸ್ಕ್‌ ಕಂಪನಿಗೆ ಭಾರೀ ಸವಾಲೊಡ್ಡಲಿದೆ ಎನ್ನಲಾಗಿದೆ.

- 6 ಟನ್‌ ತೂಕದ ಅಮೆರಿಕ ಕಂಪನಿ ಸ್ಯಾಟಲೈಟ್‌- ಉಪಗ್ರಹದಿಂದಲೇ ಫೋನ್‌ ಕರೆಗೆ ಅವಕಾಶ

- ಅಮೆರಿಕದ ಟೆಕ್ಸಾಸ್‌ ಮೂಲದ ಎಎಸ್‌ಟಿ ಕಂಪನಿ ‘ಬ್ಲ್ಯೂಬರ್ಡ್‌’ ಹೆಸರಿನ ಉಪಗ್ರಹ ಅಭಿವೃದ್ಧಿಪಡಿಸಿದೆ- ಉಪಗ್ರಹದಿಂದ ನೇರವಾಗಿ ಭೂಮಿಯ ಯಾವುದೇ ಮೂಲೆಗೆ ಕರೆ ಮಾಡಲು ಇದರಿಂದ ಅವಕಾಶ- ಕುಗ್ರಾಮಗಳಿಗೂ 5ಜಿ ಸೇವೆ ಒದಗಿಸುವ ಈ ಉಪಗ್ರಹ ಉಡಾವಣೆಗೆ ಕಂಪನಿಯಿಂದ ಇಸ್ರೋಗೆ ಮೊರೆ- ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಶ್ರೀಹರಿಕೋಟದಿಂದ ನಭಕ್ಕೆ ಹಾರಲಿದೆ ಅಮೆರಿಕದ ಸ್ಯಾಟಲೈಟ್‌