ಸಾರಾಂಶ
ನವದೆಹಲಿ : ದೇಶದ ಕನಸಿನ ಅಂತರಿಕ್ಷ ಕೇಂದ್ರದ ಪ್ರತಿಕೃತಿಯನ್ನು ಇಸ್ರೋ ಶುಕ್ರವಾರ ಅನಾವರಣಗೊಳಿಸಿದೆ. ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 2 ದಿನದ ರಾಷ್ಟ್ರೀಯ ಅಂತರಿಕ್ಷ ದಿನ ಆಚರಣೆಯ ಸಂದರ್ಭದಲ್ಲಿ ಈ ಮಹತ್ವದ ಬೆಳವಣಿಗೆಯಾಗಿದೆ.
2028ರ ವೇಳೆಗೆ ಭೂಮಿಯಿಂದಾಚೆಗೆ ತನ್ನ ಸ್ವಂತ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲು ಮೊದಲ ಮಾಡ್ಯೂಲ್ ಕಳಿಸಿ, ಆ ಸಾಧನೆ ಮಾಡಿರುವ ಕೆಲ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಭಾರತದ ಹೆಬ್ಬಯಕೆಯಾಗಿದೆ. ಜತೆಗೆ, 2035ರ ಹೊತ್ತಿಗೆ ಬಿಎಸ್‌ಎಯ 5 ಮಾಡ್ಯೂಲ್‌ಗಳನ್ನು ಹೊಂದುವ ಗುರಿಯೂ ಇದೆ. ಮೊದಲ ಮಾಡ್ಯೂಲ್ 10 ಕೆ.ಜಿ. ತೂಗಲಿದ್ದು, 450 ಭೂಮಿಯಿಂದ ಕಿ.ಮೀ. ದೂರದ ಕೆಳಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಇರುವ ಬಾಹ್ಯಾಕಾಶ ಕೇಂದ್ರಗಳೆಂದರೆ ಅವು ಅಮೆರಿಕದ ನಾಸಾ, ರಷ್ಯಾದ ರೋಸ್‌ಕೋಸ್‌ಮೋಸ್, ಯುರೋಪ್‌ನ ಇಎಸ್‌ಎ, ಜಪಾನ್‌ನ ಜಾಕ್ಸಾ, ಕೆನಡಾದ ಸಿಎಸ್‌ಎ ಸೇರಿದಂತೆ 5 ಬಾಹ್ಯಾಕಾಶ ಸಂಸ್ಥೆಗಳು ನಿರ್ವಹಿಸುತ್ತಿರುವ ಐಎಸ್‌ಎಸ್ ಮತ್ತು ಚೀನಾದ ಟಿಯಾಂಗಾಂಗ್ ಮಾತ್ರ.
ಬಿಎಸ್‌ಎ ವೈಶಿಷ್ಟ್ಯಗಳೇನು?:
ಬಿಎಸ್‌ಎ ಕೇಂದ್ರದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಿಸರ ನಿಯಂತ್ರಣ ಮತ್ತು ಜೀವಾಧಾರಕ ವ್ಯವಸ್ಥೆ, ಭಾರತ ಡಾಕಿಂಗ್ ವ್ಯವಸ್ಥೆ, ಭಾರತ್ ಬರ್ತಿಂಗ್ (ಬಾಹ್ಯಾಕಾಶ ನೌಕೆಗಳನ್ನು ಕೂಡಿಸುವ) ವ್ಯವಸ್ಥೆ, ಸ್ವಯಂಚಾಲಿತ ಹ್ಯಾಚ್ (ನೌಕೆಯಿಂದ ಯಾನಿಗಳು ಹೊರಬರುವ ಸ್ಥಳ) ವ್ಯವಸ್ಥೆ, ಸೂಕ್ಷ್ಮ ಗುರುತ್ವಾಕರ್ಷಣೆಯ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರದರ್ಶನಕ್ಕೆ ವೇದಿಕೆ, ವೈಜ್ಞಾನಿಕ ಚಿತ್ರಣ ಮತ್ತು ಸಿಬ್ಬಂದಿ ಮನರಂಜನೆಗಾಗಿ ವ್ಯೂಪೋರ್ಟ್‌ಗಳು ಇರಲಿವೆ.
ಈ ಕೇಂದ್ರದಲ್ಲಿ ಪ್ರೊಪಲ್ಷನ್ ಮತ್ತು ಇಸಿಎಲ್‌ಎಸ್‌ಎಸ್ ದ್ರವಗಳ ಮರುಪೂರಣ, ವಿಕಿರಣ, ಉಷ್ಣ ಮತ್ತು ಮೈಕ್ರೋ ಮೆಟಿರಾಯ್ಡ್ ಕಕ್ಷೆಯಲ್ಲಿ ತೇಲುತ್ತಿರುವ ಅವಶೇಷಗಳಿಂದ ರಕ್ಷಣೆ ಒದಗಿಸುವ ವ್ಯವಸ್ಥೆ, ಬಾಹ್ಯಾಕಾಶ ಸೂಟ್ ಸೇರಿದಂತೆ ಅನೇಕ ಸೌಲಭ್ಯಗಳಿರುತ್ತವೆ. ಬಿಎಸ್‌ಎ ಸ್ಥಾಪನೆಯಾದ ಬಳಿಕ, ಬಾಹ್ಯಾಕಾಶ, ಜೀವ ವಿಜ್ಞಾನ, ವೈದ್ಯಕೀಯ ಪರಿಶೋಧನೆಗಳಿಗೆ ವೇದಿಕೆ ಕಲ್ಪಿಸಲಿದೆ.