ಸಾರಾಂಶ
ತೆರಿಗೆ ವಂಚನೆ ಹೆಸರಲ್ಲಿ ಆದಾಯ ತೆರಿಗೆ ಇಲಾಖೆ ತನಗೆ ನೀಡುತ್ತಿರುವ ಸರಣಿ ನೋಟಿಸ್ ಖಂಡಿಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಶನಿವಾರ ದೇಶವ್ಯಾಪಿ ಪ್ರತಿಭಟನೆ ನಡೆಸಿ ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿ: ತೆರಿಗೆ ವಂಚನೆ ಹೆಸರಲ್ಲಿ ಆದಾಯ ತೆರಿಗೆ ಇಲಾಖೆ ತನಗೆ ನೀಡುತ್ತಿರುವ ಸರಣಿ ನೋಟಿಸ್ ಖಂಡಿಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಶನಿವಾರ ದೇಶವ್ಯಾಪಿ ಪ್ರತಿಭಟನೆ ನಡೆಸಿ ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಬಿಜೆಪಿಯು ನಡೆಸುತ್ತಿರುವ ತೆರಿಗೆ ಭಯೋತ್ಪಾದನೆಗೆ ಕಾಂಗ್ರೆಸ್ ಬಗ್ಗುವುದಿಲ್ಲ. ಪಕ್ಷವು ಇನ್ನಷ್ಟು ಬಲಾಢ್ಯವಾಗಿ ವಿಜಯ ಸಾಧಿಸಲಿದೆ’ ಎಂದು ಎಚ್ಚರಿಕೆ ನೀಡಿದರು.ಪಕ್ಷದ ಇನ್ನೋರ್ವ ನಾಯಕ ಚಿದಂಬರಂ ಮಾತನಾಡಿ, ‘ಬಿಜೆಪಿಯು ಈ ಮೂಲಕ ರಾಷ್ಟ್ರದ ಎಲ್ಲ ರಾಜಕೀಯ ಪಕ್ಷಗಳಿಗೆ ವಿನಾಶದ ಸಂದೇಶವನ್ನು ಕಳುಹಿಸಿದೆ. ಆ ಮೂಲಕ ಒಂದು ದೇಶ ಒಂದು ಚುನಾವಣೆಯ ರೀತಿಯಲ್ಲಿ ಒಂದು ದೇಶ ಒಂದು ಪಕ್ಷವಾಗಿ ಹೊರಹೊಮ್ಮುವ ಕನಸು ಕಾಣುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಯುವ ಘಟಕದಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಅಧ್ಯಕ್ಷ ಬಿವಿ ಶ್ರೀನಿವಾಸ್ ಮತ್ತು ಸಂಗಡಿಗರನ್ನು ವಶಕ್ಕೆ ಪಡೆಯಲಾಯಿತು. ಇದರ ಜೊತೆಗೆ ಲಖನೌ, ಜೈಪುರ, ತಿರುವನಂತಪುರ, ಚಂಡೀಗಢ, ಡೆಹ್ರಾಡೂನ್ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ.ಈ ನಡುವೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದು, ‘ತನ್ನ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್ ಪಕ್ಷ ಬಿಜೆಪಿಯತ್ತ ಬೊಟ್ಟು ಮಾಡುತ್ತಿದೆ. ಕಾಂಗ್ರೆಸ್‌ಗೆ ಹೊಸ ತೆರಿಗೆ ನೀತಿ ತರಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.