ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗನ್‌ ಮೋಹನ್‌, ಕಳೆದ 5 ವರ್ಷದ ಅವಧಿಯಲ್ಲಿ ರಾಜ್ಯದ 26 ಜಿಲ್ಲೆಗಳಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಕಚೇರಿ ನಿರ್ಮಾಣಕ್ಕೆ 42 ಎಕರೆ ಜಾಗ ನೀಡಿದ್ದರು ಎಂದು ಟಿಡಿಪಿ ನಾಯಕ, ಸಚಿವ ನ.ರ.ಲೋಕೇಶ್‌ ಆರೋಪಿಸಿದ್ದಾರೆ.

ಅಮರಾವತಿ: ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗನ್‌ ಮೋಹನ್‌, ಕಳೆದ 5 ವರ್ಷದ ಅವಧಿಯಲ್ಲಿ ರಾಜ್ಯದ 26 ಜಿಲ್ಲೆಗಳಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಕಚೇರಿ ನಿರ್ಮಾಣಕ್ಕೆ 42 ಎಕರೆ ಜಾಗ ನೀಡಿದ್ದರು ಎಂದು ಟಿಡಿಪಿ ನಾಯಕ, ಸಚಿವ ನ.ರ.ಲೋಕೇಶ್‌ ಆರೋಪಿಸಿದ್ದಾರೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೇಶ್‌, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಕಚೇರಿ ನಿರ್ಮಾಣಕ್ಕೆ ಜಾಗವನ್ನು 33 ವರ್ಷದ ಅವಧಿಗೆ ಕೇವಲ 1000 ರು. ಲೀಸ್‌ ನೀಡಲಾಗಿದೆ. 

ಈ ಜಾಗದ ಮೊತ್ತದ 600 ಕೋಟಿ ರು.. ಇಷ್ಟು ಹಣದಲ್ಲಿ 4,200 ಬಡವರಿಗೆ ಒಂದು ಸೆಂಟ್ ಭೂಮಿ ಸುಲಭವಾಗಿ ಹಂಚಬಹುದಿತ್ತು ಎಂದು ಹೇಳಿದ್ದಾರೆ. ಇನ್ನು ವಿಶಾಖಪಟ್ಟಣಂನಲ್ಲಿ ಜಗನ್‌ ನಿರ್ಮಿಸಿದ ಅರಮನೆ ರೀತಿಯ 500 ಕೋಟಿ ರು. ಮೊತ್ತದ ಬಂಗಲೆ ಹಣದಲ್ಲಿ 25000 ಬಡವರಿಗೆ ಮನೆ ನಿರ್ಮಿಸಿಕೊಡಬಹುದಿತ್ತು ಎಂದು ಹೇಳಿದ್ದಾರೆ.

ವೈಎಸ್‌ಆರ್‌ ಕಾಂಗ್ರೆಸ್‌ನ ಮತ್ತೊಂದು ಕಟ್ಟಡಕ್ಕೂ ಧ್ವಂಸ ಭೀತಿ: ನೋಟಿಸ್‌ ಜಾರಿ

ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಟಿಡಿಪಿ ಅಧಿಕಾರಕ್ಕೆ ಬಂದ ಬಳಿಕ ವೈಎಸ್‌ಆರ್‌ ಕಾಂಗ್ರೆಸ್‌ನ ಮತ್ತೊಂದು ಕಟ್ಟಡಕ್ಕೆ ಸಂಚಕಾರ ಎದುರಾಗಿದೆ. ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಕಚೇರಿಯನ್ನು ಶನಿವಾರ ಸ್ಥಳೀಯಾಡಳಿತ ನೆಲಸಮಗೊಳಿಸಿತ್ತು. ಅದರ ಬೆನ್ನಲ್ಲೇ ಗ್ರೆಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯ ಎನೆಡ ಗ್ರಾಮ ಮತ್ತು ಅನಕಪಲ್ಲಿಯಲ್ಲಿನ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೂ ನೋಟಿಸ್‌ ನೀಡಲಾಗಿದೆ. 

ನೋಟಿಸ್‌ನಲ್ಲಿ ಅಕ್ರಮ ನಿರ್ಮಾಣ ಕಾರ್ಯವನ್ನು ಶೀಘ್ರವೇ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದ್ದು, ಏಳು ದಿನದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ವೈಎಸ್‌ಆರ್‌ ಕಾಂಗ್ರೆಸ್‌ ರಾಜ್ಯದಲ್ಲಿ 3 ರಾಜಧಾನಿ ನಿರ್ಮಾಣ ಹೊಂದಿದ್ದ ಕಾರಣ ವಿಶಾಖಪಟ್ಟಣಂನದಲ್ಲೂ ಬೃಹತ್‌ ಕಚೇರಿ ನಿರ್ಮಾಣಕ್ಕೆ ಮುಂದಾಗಿತ್ತು.

ಚುನಾವಣೆ ಬಳಿಕ 4 ಟೀವಿ ಪ್ರಸಾರಕ್ಕೆ ತಡೆ: ಟ್ರಾಯ್‌ಗೆ ವೈಎಸ್‌ಆರ್‌ ಕಾಂಗ್ರೆಸ್‌ ದೂರು

ಅಮರಾವತಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಗೆದ್ದ ಬೆನ್ನಲ್ಲೇ ಆರಂಭವಾಗಿರುವ ವೈಎಸ್‌ಆರ್‌ ಕಾಂಗ್ರೆಸ್‌ನ ಕಟ್ಟಡಗಳ ಧ್ವಂಸಗಳ ನಡುವೆಯೇ, 4 ಸುದ್ದಿ ವಾಹಿನಿಗಳು ಕೂಡಾ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿವೆ. 

ಟಿಡಿಪಿ ಗೆದ್ದ ಬಳಿಕ ರಾಜ್ಯದಲ್ಲಿ ಟೀವಿ9, ಎನ್‌ಟೀವಿ, 10ಟೀವಿ ಮತ್ತು ಸಾಕ್ಷಿ ಟೀವಿಯ ಪ್ರಸಾರವನ್ನು ಹಲವು ಲೋಕಲ್‌ ಟೇಬಲ್‌ ಸರ್ವಿಸ್‌ ಆಪರೇಟರ್‌ಗಳು ನಿರ್ಬಂಧಿಸಿದ್ದಾರೆ. ಇದರ ಹಿಂದೆ ಟಿಡಿಪಿ ಕೈವಾಡವಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಆರೋಪಿಸಿದೆ. ಈ ಕುರಿತು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರವಾದ ಟ್ರಾಯ್‌ಗೂ ದೂರು ನೀಡಲಾಗಿದೆ ಎಂದು ಪಕ್ಷದ ಸಂಸದ ಎಸ್‌. ನಿರಂಜನ್‌ ರೆಡ್ಡಿ ಹೇಳಿದ್ದಾರೆ.