ಸಾರಾಂಶ
ಕಾನೂನಾತ್ಮಕ ಪ್ರತ್ಯುತ್ತರ ನೀಡುತ್ತೇವೆ ಎಂಬುದಾಗಿ ಕಾಂಗ್ರೆಸ್‌ನ ಜೈರಾಂ ರಮೇಶ್ ನಿತಿನ್ ಗಡ್ಕರಿಯವರು ನೀಡಿರುವ ಲೀಗಲ್ ನೋಟಿಸ್‌ಗೆ ತಿರುಗೇಟು ನೀಡಿದ್ದಾರೆ.
ನವದೆಹಲಿ: ತಾನು ಬಡವರ ಕುರಿತು ನೀಡಿದ್ದ ಸಂದರ್ಶನದ ವಿಡಿಯೋವನ್ನು ಕಾಂಗ್ರೆಸ್ ಪಕ್ಷವು ತಿರುಚಿ ಪ್ರಸಾರ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಂ ರಮೇಶ್ ಅವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೀಗಲ್ ನೋಟಿಸ್ ನೀಡಿದ್ದಾರೆ.
ನಿತಿನ್ ಗಡ್ಕರಿ ಅವರು ಲಲನ್‌ಟಾಪ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಜನರು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಮತ್ತು ಶಾಲೆಗಳ ಉತ್ತಮ ಗುಣಮಟ್ಟದ ಸೌಲಭ್ಯವಿಲ್ಲದೆ ಬಡತನದಲ್ಲಿದ್ದಾರೆ’ ಎಂದು ಹೇಳಿದ್ದರು ಎನ್ನಲಾದ ವಿಡಿಯೋವನ್ನು ಕಾಂಗ್ರೆಸ್ ಪಕ್ಷ ಹಿಂದಿ ಅಡಿಬರಹದೊಂದಿಗೆ ಹಂಚಿಕೊಂಡಿತ್ತು.
ಹೀಗಾಗಿ ಇದು ತಿರುಚಿದ ವಿಡಿಯೋ ಎಂದು ಗಡ್ಕರಿ ಕಿಡಿಕಾರಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಪ್ರತಿಕ್ರಿಯಿಸಿದ್ದು, ‘ವಿಡಿಯೋದಲ್ಲಿ ಸತ್ಯಾಂಶವನ್ನೇ ತೋರಿಸಿದ್ದು, ತಿರುಚಿ ಪ್ರಸಾರ ಮಾಡಿಲ್ಲ. ಅವರಿಗೆ ಕಾನೂನಾತ್ಮಕವಾಗಿ ಪ್ರತ್ಯುತ್ತರ ಕೊಡುತ್ತೇವೆ’ ಎಂದು ತಿರುಗೇಟು ನೀಡಿದ್ದಾರೆ.