ಸಾರಾಂಶ
ಮರುಭೂಮಿ ನಾಡು ರಾಜಸ್ಥಾನದ ಜಾಲೋರ್‌ನಲ್ಲಿ ಬಿಸಿಲಿನ ತಾಪ ಏರಿದಂತೆ ಚುನಾವಣಾ ಕಾವು ಕೂಡ ಹೆಚ್ಚುತ್ತಿದೆ. ಜಾಲೋರ್‌ನಲ್ಲಿ ಬಿಜೆಪಿ ತನ್ನ ಹ್ಯಾಟ್ರಿಕ್ ಸಂಸದ ದೇವ್‌ಜಿ ಪಟೇಲ್‌ಗೆ ಟಿಕೆಟ್ ನಿರಾಕರಿಸಿ ಸಾಮಾನ್ಯ ಕಾರ್ಯಕರ್ತ ಲಂಬಾರಾಂ ಚೌಧರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್‌ಗೆ ಕಣದಲ್ಲಿದ್ದಾರೆ. ಹಾಗೆಯೇ ಬಿಎಸ್‌ಪಿ ಸಹ ಸ್ಥಳೀಯ ಪ್ರಬಲ ಸಮುದಾಯಕ್ಕೆ ಸೇರಿದ ಲಾಲ್ ಸಿಂಗ್ ರಾಥೋಡ್ ಅವರನ್ನು ಕಣಕ್ಕಿಳಿಸಿರುವುದು ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾಡಿದೆ.
ಬಿಜೆಪಿಯ ಪ್ರಯೋಗ ಯಶ ಕಾಣುವುದೇ?
ಬಿಜೆಪಿಯು ತನ್ನ ಹ್ಯಾಟ್ರಿಕ್ ಸಂಸದ ದೇವ್‌ಜಿ ಪಟೇಲ್‌ಗೆ ಟಿಕೆಟ್ ನಿರಾಕರಿಸಿ ಸ್ಥಳೀಯ ಬಿಜೆಪಿ ಸಾಮಾನ್ಯ ಕಾರ್ಯಕರ್ತ ಲಂಬಾರಾಂ ಚೌಧರಿಗೆ ಟಿಕೆಟ್ ನೀಡಿದೆ. ಬಿಜೆಪಿಯ ಈ ಪ್ರಯೋಗ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿಯು ಕಳೆದ ಎರಡು ಚುನಾವಣೆಗಳಲ್ಲಿ ರಾಜಸ್ಥಾನವನ್ನು ಕ್ಲೀನ್‌ಸ್ವೀಪ್ ಮಾಡಿದ್ದ ಹಿನ್ನೆಲೆಯಲ್ಲಿ ಹಲವು ಪ್ರಯೋಗಕ್ಕೆ ಮುಂದಾಗಿದ್ದು, ಅದರ ಭಾಗವಾಗಿ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಸಂಸದರಾಗಿದ್ದ ದೇವ್‌ಜಿ ಪಟೇಲ್‌ರನ್ನು ಕಣಕ್ಕಿಳಿಸಿತ್ತು. ಆದರೆ ದೇವ್‌ಜಿ ಸೋಲುಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಸಂಸದ ಸ್ಥಾನಕ್ಕೂ ಟಿಕೆಟ್ ನಿರಾಕರಿಸಲಾಗಿದೆ. ಹೀಗಾಗಿ ಬಿಜೆಪಿ ಕಣಕ್ಕಿಳಿಸಿರುವ ಸಾಮಾನ್ಯ ಅಭ್ಯರ್ಥಿ ಲಂಬಾರಾಂ ಚೌಧರಿ ಕೇವಲ ಮೋದಿ ಅಲೆಯನ್ನು ನೆಚ್ಚಿಕೊಂಡು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಅವರು ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಯಶಸ್ವಿಯಾಗುವರೇ ಎಂಬುದು ಕುತೂಹಲ ಮೂಡಿಸಿದೆ.
ಮಾಜಿ ಸಿಎಂ ಪುತ್ರ ಕಣಕ್ಕೆ:
ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್‌ಗೆ ಟಿಕೆಟ್ ನೀಡಲಾಗಿದೆ. ತಮ್ಮ ತಂದೆ ಸೋಲಿಲ್ಲದ ಸರದಾರ ಎನಿಸಿದ್ದರೂ ಪುತ್ರ ವೈಭವ್ ಕಳೆದ ಬಾರಿ ತಮ್ಮ ಮೊದಲ ಸ್ಪರ್ಧೆಯಲ್ಲೇ ಬಿಜೆಪಿಯ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ಭಾರೀ ಅಂತರದಿಂದ ಜೋಧ್‌ಪುರ ಕ್ಷೇತ್ರದಲ್ಲಿ ಸೋಲುಂಡಿದ್ದರು. ಹೀಗಾಗಿ ಇದು ವೈಭವ್‌ಗೆ ಎರಡನೇ ಲೋಕಸಭಾ ಚುನಾವಣೆಯಾಗಿದ್ದು, ಅದರಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶ ಕಾಣುವರೇ ಎಂಬುದು ಚುನಾವಣಾ ಫಲಿತಾಂಶದ ಬಳಿಕ ತಿಳಿಯಲಿದೆ.
ಸ್ಪರ್ಧೆ ಹೇಗೆ?
ವೈಭವ್ ಗೆಹ್ಲೋಟ್ ಅವರು ವಚನ ಪತ್ರ ಎಂಬ ಹೆಸರಿನಲ್ಲಿ ಅತ್ಯಾಕರ್ಷಕ ಭರವಸೆಗಳುಳ್ಳ ಸ್ಥಳೀಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜನರನ್ನು ಸೆಳೆಯುತ್ತಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ತೊರೆದು ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಲಾಲ್‌ಸಿಂಗ್ ಕೊನೇ ಕ್ಷಣದಲ್ಲಿ ನಾಮಪತ್ರ ಹಿಂಪಡೆಯುವ ಮೂಲಕ ವೈಭವ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಮತ್ತು ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯಿಂದ ಬಿಜೆಪಿ ಸಂಸದರೇ ಇರುವುದು ಬಿಜೆಪಿಗೆ ವರದಾನವಾಗುವ ಸಾಧ್ಯತೆಯಿದೆ.
ಸ್ಟಾರ್ ಕ್ಷೇತ್ರ: ಜಾಲೋರ್
ರಾಜ್ಯ: ರಾಜಸ್ಥಾನ
ಮತದಾನದ ದಿನ: ಏ.26
ವಿಧಾನಸಭಾ ಕ್ಷೇತ್ರಗಳು: 8
ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ- ಲಂಬಾರಾಂ ಚೌಧರಿ
ಕಾಂಗ್ರೆಸ್- ವೈಭವ್ ಗೆಹ್ಲೋಟ್
ಬಿಎಸ್‌ಪಿ- ಲಾಲ್ ಸಿಂಗ್2019ರ ಫಲಿತಾಂಶ
ಗೆಲುವು: ಬಿಜೆಪಿ- ದೇವ್‌ಜಿ ಎಂ ಪಟೇಲ್
ಸೋಲು: ಕಾಂಗ್ರೆಸ್- ರತನ್ ದೇವಾಸಿ