ಸಾರಾಂಶ
ಅಮಿತಾಭ್ ಬಚ್ಚನ್ ಮತ್ತು ಪತ್ನಿ ಜಯಾ ಆಸ್ತಿ 1,578 ಕೋಟಿ ರು. ಆಗಿದ್ದು, 130 ಕೋಟಿ ರು. ಬ್ಯಾಂಕ್ ಬ್ಯಾಲೆನ್ಸ್, 17 ಕಾರು, 95.74 ಕೋಟಿ ರು. ಮೌಲ್ಯದ ಆಭರಣಗಳು ತಮ್ಮ ಬಳಿ ಇರುವುದಾಗಿ ಚುನಾವಣಾ ಅಫಿಡವಿಟ್‌ನಲ್ಲಿ ಜಯಾ ಘೋಷಣೆ ಮಾಡಿಕೊಂಡಿದ್ದಾರೆ.
ಲಖನೌ: ನಟ ಅಮಿತಾಭ್ ಬಚ್ಚನ್ ಹಾಗೂ ತಮ್ಮ ಒಟ್ಟು ನಿವ್ವಳ ಆಸ್ತಿ ಮೌಲ್ಯವು ಬರೋಬ್ಬರಿ 1,578 ಕೋಟಿ ರು.ಗಳಷ್ಟಿದೆ ಎಂದು ನಟಿ ಜಯಾ ಬಚ್ಚನ್ ಘೋಷಿಸಿಕೊಂಡಿದ್ದಾರೆ.
ಸಮಾಜವಾದಿ ಪಕ್ಷದಿಂದ ಉತ್ತರ ಪ್ರದೇಶದಲ್ಲಿ 5ನೇ ಬಾರಿಗೆ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವಜಯಾ, ಚುನಾವಣಾ ಅಫಿಡವಿಟ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ.
ಅಫಡವಿಟ್ ಪ್ರಕಾರ ಜಯಾ ಅವರ ಬ್ಯಾಂಕ್ ಠೇವಣಿ 10.11 ಕೋಟಿ ರು.ಗಳಿದ್ದು, ಅಮಿತಾಭ್ ಅವರದ್ದು 120.45 ಕೋಟಿ ರು. ಇದೆ. ಉಳಿದಂತೆ ದಂಪತಿಗಳಿಬ್ಬರ ಬಳಿ ಒಟ್ಟು 95.74 ಕೋಟಿ ರು. ಮೌಲ್ಯದ ಆಭರಣಗಳಿದ್ದು, ಮರ್ಸಿಡಿಸ್ ಮತ್ತು ರೇಂಜ್ ರೋವರ್ ಸೇರಿ ಒಟ್ಟು 17 ಕಾರುಗಳನ್ನು ಹೊಂದಿದ್ದಾರೆ.
2022-23ರ ಆರ್ಥಿಕ ವರ್ಷದಲ್ಲಿ ಜಯಾ ವೈಯಕ್ತಿಕ ನಿವ್ವಳ ಆದಾಯವು 1.63 ಕೋಟಿ ರು.ಗಳಷ್ಟಿತ್ತು ಹಾಗೂ ಅದೇ ವರ್ಷ ಅಮಿತಾಭ್ ಅವರ ಆದಾಯ 273.74 ಕೋಟಿ ರು.ಗಳಷ್ಟಿತ್ತು ಎಂದು ಘೋಷಿಸಲಾಗಿದೆ.