ಸಾರಾಂಶ
ನವದೆಹಲಿ : ಲೋಕಸಭೆಯಲ್ಲಿ ಬುಧವಾರ ಮಂಡನೆ ಆದ ವಕ್ಫ್ ತಿದ್ದುಪಡಿ ವಿಧೇಯಕ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆಗೆ ನಾಂದಿ ಹಾಡಿತು. ವಿಪಕ್ಷಗಳು ವಿಧೇಯಕವನ್ನು ಬಲವಾಗಿ ವಿರೋಧಿಸಿ, ‘ಇದು ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ಕ್ರೂರ ಕಾಯ್ದೆ’ ಎಂದು ಕರೆದರೆ, ಸರ್ಕಾರವು, ‘ಇದು ಮಾಫಿಯಾದಿಂದ ತುಂಬಿ ಹೋಗಿರುವ ವಕ್ಫ್ ಮಂಡಳಿಯನ್ನು ರಕ್ಷಿಸುವ ಪ್ರಕ್ರಿಯೆ’ ಎಂದು ಸಮರ್ಥಿಸಿಕೊಂಡಿತು ಹಾಗೂ ಸಮಗ್ರ ಪರಾಮರ್ಶೆಗಾಗಿ ವಿಧೇಯಕವನ್ನು ಜಂಟಿ ಸಂಸದೀಯ ಸಮಿತಿಗೆ ಕಳಿಸುವುದಾಗಿ ಹೇಳಿತು.
ಸದನದಲ್ಲಿ ಸಂಸದೀಯ ಸಚಿವ ಕಿರಣ್ ರಿಜಿಜು ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಮಂಡಿಸಿದರು. ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಈಗಿನ ವಕ್ಫ್ ಕಾಯ್ದೆಯು ಮೂಲ ಉದ್ದೇಶ ಈಡೇರಿಸಲು ವಿಫಲವಾಗಿದೆ. ಅನೇಕ ತಪ್ಪುಗಳನ್ನು ಹೊಂದಿದೆ. ಹೀಗಾಗಿ ಮಸೂದೆ ಮಂಡಿಸಲಾಗಿದೆ’ ಎಂದರು.ಆದರೆ ಮಸೂದೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್ ಮಾತನಾಡಿ, ‘ಇದು ಕ್ರೂರ ಕಾನೂನು.
ಇದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ’ ಎಂದರು ಹಾಗೂ ವಕ್ಫ್ ಮಂಡಳಿಗೆ ಮುಸ್ಲಿಮೇತರ ಸದಸ್ಯರನ್ನು ನೇಮಿಸುವ ನಿಬಂಧನೆಯನ್ನು ವಿರೋಧಿಸಿದರು.2ಣೇ ಅತಿದೊಡ್ಡ ವಿಪಕ್ಷ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಕೂಡ ಮಸೂದೆ ವಿರೋಧಿಸಿ, ‘ಈ ಮಸೂದೆಯನ್ನು ರಾಜಕೀಯ ಉದ್ದೇಶದಿಂದ ಮಂಡಿಸಲಾಗಿದೆ.
ವಕ್ಫ್ ಸಂಸ್ಥೆಗಳಲ್ಲಿ ಮುಸ್ಲಿಂ ಅಲ್ಲದವರನ್ನು ಸೇರಿಸುವುದರಲ್ಲಿ ಏನು ಅರ್ಥವಿದೆ? ತಿದ್ದುಪಡಿಗಳ ನೆಪದಲ್ಲಿ ಬಿಜೆಪಿ ವಕ್ಫ್ ಬೋರ್ಡ್‌ಗಳಿಗೆ ಸೇರಿದ ಭೂಮಿಯನ್ನು ಮಾರಾಟ ಮಾಡಲು ಬಯಸುತ್ತಿದೆ’ ಎಂದು ಕಿಡಿಕಾರಿದರು.ಸಮಾಜವಾದಿ ಪಕ್ಷದ ಮತ್ತೋರ್ವ ಸಂಸದ ಮೊಹಿಬುಲ್ಲಾ ಮಾತನಾಡಿ , ‘ಮುಸ್ಲಿಮರಿಗೆ ಇದರಿಂದ ಅನ್ಯಾಯವಾಗಿದೆ. ನಾವು ದೊಡ್ಡ ತಪ್ಪು ಮಾಡಲಿದ್ದೇವೆ. ಶತಮಾನಗಳವರೆಗೆ ಈ ಮಸೂದೆಯಿಂದಾಗಿ ನಾವು ಯಾತನ ಅನುಭವಿಸುತ್ತೇವೆ. ಇದು ಧರ್ಮಕ್ಕೆ ತೊಡಕಾಗಿದೆ’ ಎಂದರು.
ಡಿಎಂಕೆಯ ಕೆ. ಕನಿಮೋಳಿ ಮಾತನಾಡಿ, ‘ಇದು ಅಲ್ಪಸಂಖ್ಯಾತ ಸಮುದಾಯದ ವಿರೋಧಿ ಮಸೂದೆ. ಹಿಂದೂ ದೇವಾಲಯಗಳನ್ನು ಕ್ರಿಶ್ಚಿಯನ್ ಮತ್ತು ಮುಸ್ಲಿಮರು ನಿರ್ವಹಿಸಲು ಸಾಧ್ಯವೇ?’ ಎಂದು ಕೇಳಿದರುಎನ್‌ಸಿಪಿಯ ಶರದ್ ಪವಾರ್ ಬಣದ ಸುಪ್ರಿಯಾ ಸುಳೆ, ಮಸೂದೆಯನ್ನು ಸದನಕ್ಕೆ ತರುವ ಮೊದಲು ಸರ್ಕಾರವು ವಿವರವಾದ ಸಮಾಲೋಚನೆ ನಡೆಸಲಿಲ್ಲ. ಇದನ್ನು ಸ್ಥಾಯಿ ಸಮಿತಿಗೆ ಕಳಸಬೇಕು ಎಂದು ಆಗ್ರಹಿಸಿದರು.
ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ‘ಮುಸ್ಲಿಮರು ತಮ್ಮ ವಕ್ಫ್ ಆಸ್ತಿಯನ್ನು ನಿರ್ವಹಿಸುವ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರುತ್ತಿದೆ. ಇದು ಕಾನೂನು ಬಾಹಿರ ಮಸೂದೆ’ ಎಂದು ಕಿಡಿಕಾರಿದರು.ಆದರೆ, ಶಾಸನವನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಮತ್ತು ಬಿಜೆಪಿ ಮಿತ್ರಪಕ್ಷ ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್, ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯನ್ನು ಪಾರದರ್ಶಕಗೊಳಿಸಲು ಮಸೂದೆಯನ್ನು ತರಲಾಗಿದೆ ಎಂದು ಹೇಳಿದರು. ಬಿಜೆಪಿಯ ಇನ್ನೊಂದು ಮಿತ್ರಪಕ್ಷ ತೆಲುಗುದೇಶಂ ಕೂಡ ಮಸೂದೆ ಬೆಂಬಲಿಸಿತು.
ಸರ್ಕಾರ ಸಮರ್ಥನೆ:
ಸರ್ಕಾರದ ಪರ ಮಸೂದೆ ಸಮರ್ಥಿಸಿಕೊಂಡು ಮಾತನಾಡಿದ ಸಂಸದೀಯ ಸಚಿವ ರಿಜಿಜು, ‘ಹಿಂದಿನ ಕಾಂಗ್ರೆಸ್ ಸರ್ಕಾರಗಳು ಕಾನೂನಿನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಹೀಗಾಗಿ ನಮ್ಮ ಸರ್ಕಾರ ತಿದ್ದುಪಡಿ ತರಲು ಉದ್ದೇಶಿಸಿದೆ. ಈ ಮೂಲಕ ರಾಜ್ಯ ವಕ್ಫ್ ಮಂಡಳಿಗಳ ಅಧಿಕಾರಗಳು, ವಕ್ಫ್ ಆಸ್ತಿಗಳ ನೋಂದಣಿ-ಸಮೀಕ್ಷೆ ಮತ್ತು ಅತಿಕ್ರಮಣ ತೆಗೆಯುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಉದ್ದೇಶಿಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡುವ ಯಾವುದೇ ಉದ್ದೇಶವಿಲ್ಲ. ಬದಲಾಗಿ ಸಾಮಾನ್ಯರಿಗೆ ನ್ಯಾಯ ನೀಡುವ ಉದ್ದೇಶ ಹೊಂದಿದೆ’ ಎಂದರು.
ಅಲ್ಲದೆ, ‘ನಗರಾಡಳಿತದ ಕಚೇರಿಯನ್ನೇ ವಕ್ಫ್ ಮಂಡಳಿಗೆ ವಶಪಡಿಸಿಕೊಳ್ಳುವ ಅಧಿಕಾರ ಈಗಿದೆ. ಇದು ಸರಿಯೇ?’ ಎಂದು ಪ್ರಶ್ನಿಸಿದ ಅವರು, ‘ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಮಸೂದೆ ಕಳಿಸಲಾಗುವುದು ಎಂದು ಪ್ರಕಟಿಸಿದರು.ಇದೇ ವೇಳೆ, ‘ಕೆಲವರು ವಕ್ಫ್ ಮಂಡಳಿಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯ ವಕ್ಫ್ ಮಂಡಳಿಗಳು ಮಾಫಿಯಾವಾಗಿ ಮಾರ್ಪಟ್ಟಿವೆ ಎಂದು ವಿರೋಧ ಪಕ್ಷದ ಹಲವು ನಾಯಕರು ಖಾಸಗಿಯಾಗಿ ಹೇಳಿದ್ದಾರೆ. ಆದರೆ ನಾನು ಅವರ ಹೆಸರನ್ನು ತೆಗೆದುಕೊಂಡು ಅವರ ರಾಜಕೀಯ ಜೀವನವನ್ನು ನಾಶಮಾಡುವುದಿಲ್ಲ’ ಎಂದು ಸೂಚ್ಯವಾಗಿ ನುಡಿದರು.‘ನೀವೂ ಈ ಮಸೂದೆಯನ್ನು ಬೆಂಬಲಿಸಿದರೆ ಮತ್ತು ನಿಮಗೆ ಕೋಟಿ ಕೋಟಿ ಜನರ ಆಶೀರ್ವಾದ ಸಿಗುತ್ತದೆ’ ಎಂದು ಟಾಂಗ್ ನೀಡಿದರು