ಬಿಜೆಪಿ ಬಹುಮತಕ್ಕೆ ತಡೆ ನೀಡಿದ್ದು ಕೇವಲ 6.26 ಲಕ್ಷ ಮತ!

| Published : Jun 07 2024, 12:33 AM IST / Updated: Jun 07 2024, 07:51 AM IST

ಬಿಜೆಪಿ ಬಹುಮತಕ್ಕೆ ತಡೆ ನೀಡಿದ್ದು ಕೇವಲ 6.26 ಲಕ್ಷ ಮತ!
Share this Article
  • FB
  • TW
  • Linkdin
  • Email

ಸಾರಾಂಶ

18ನೇ ಲೋಕಸಭಾ ಚುನಾವಣೆಯಲ್ಲಿ 240 ಸ್ಥಾನಗಳಿಸಿರುವ ಬಿಜೆಪಿ ಬಹುಮತಕ್ಕೆ ಅಗತ್ಯವಾದ 272 ಸ್ಥಾನ ತಲುಪಲು 32 ಸ್ಥಾನಗಳ ಕೊರತೆ ಎದುರಿಸುತ್ತಿದೆ.

ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ 240 ಸ್ಥಾನಗಳಿಸಿರುವ ಬಿಜೆಪಿ ಬಹುಮತಕ್ಕೆ ಅಗತ್ಯವಾದ 272 ಸ್ಥಾನ ತಲುಪಲು 32 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಅಚ್ಚರಿಯ ವಿಷಯವೆಂದರೆ ಬಿಜೆಪಿಗೆ ಹೀಗೆ ಬಹುಮತ ನಿರಾಕರಣೆಯಾಗಿದ್ದು ಕೇವಲ 6.26 ಲಕ್ಷಮತಗಳಿಂದ.

ಇದಕ್ಕೆ ಕಾರಣ ಕರ್ನಾಟಕದ ಕಲಬುರಗಿ ಹಾಗೂ ದಾವಣಗೆರೆಯೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ 33 ಕ್ಷೇತ್ರಗಳಲ್ಲಿ ಬಿಜೆಪಿ ಕೂದಲೆಳೆ ಅಂತರದಲ್ಲಿ ಸೋತಿದೆ. ಅಂತಹ ಕ್ಷೇತ್ರಗಳಲ್ಲಿ ಇನ್ನು ಕೇವಲ 6,26,311 ಮತಗಳನ್ನು ಪಡೆದುಕೊಂಡಿದ್ದರೆ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್‌ ಸಂಖ್ಯೆ(272) ತಲುಪಬಹುದಾಗಿತ್ತು.

ಬಿಜೆಪಿಯು ಚಂಡೀಗಢದಲ್ಲಿ ಕೇವಲ 2,504 ಮತಗಳಿಂದ ಸೋತಿದ್ದರೆ, ಉತ್ತರಪ್ರದೇಶದ ಹಮೀರ್‌ಪುರದಲ್ಲಿ ಕೇವಲ 2,629 ಮತಗಳಿಂದ ಪರಾಜಿತವಾಗಿದೆ. ಅದೇ ರೀತಿಯಲ್ಲಿ ತಿರುವನಂತಪುರದಲ್ಲಿ ಸ್ಪರ್ಧಿಸಿದ್ದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸಹ ಶಶಿ ತರೂರ್‌ ವಿರುದ್ಧ ಕೇವಲ 16,077 ಮತಗಳಿಂದ ಪರಾಭವಗೊಂಡಿದ್ದಾರೆ. ಅಂತಹ 33 ಕ್ಷೇತ್ರಗಳಲ್ಲಿ ಗೆಲುವಿಗೆ ಅಗತ್ಯವಾಗಿದ್ದ 6,26,311 ಮತಗಳನ್ನು ಬಿಜೆಪಿ ಪಡೆದುಕೊಳ್ಳಲು ಸಾಧ್ಯವಾಗದ ಕಾರಣ ಸ್ವಂತವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸಲು ವಿಫಲವಾಗಿ ಎನ್‌ಡಿಎ ಮೈತ್ರಿಕೂಟದ ಮಿತ್ರರ ಮರ್ಜಿಗೆ ಸಿಲುಕಬೇಕಾದ ಸ್ಥಿತಿಗೆ ತಲುಪಿದೆ.

ಈ ಪೈಕಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಸಂಸದರಲ್ಲಿ ಶೇ.66 ಮಂದಿ ಗೆಲುವು ಕಂಡಿದ್ದರೆ, ಹಾಲಿ ಸಂಸದರನ್ನು ಬದಲಿಸಿದ ಕ್ಷೇತ್ರಗಳಲ್ಲೇ 95 ಮಂದಿ (ಶೇ.72) ಗೆಲ್ಲುವ ಮೂಲಕ ಬಿಜೆಪಿಗೆ ಅತಿಹೆಚ್ಚು ಸ್ಥಾನ ಗಳಿಸಲು ನೆರವಾಗಿದ್ದಾರೆ.

ಅದೇ ರೀತಿ ಕರ್ನಾಟಕದಲ್ಲೂ ಸಹ ಬಿಜೆಪಿ ಕಲಬುರಗಿ ಹಾಗೂ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕ್ರಮವಾಗಿ ಕೇವಲ 27,205 ಹಾಗೂ 26,094 ಮತಗಳಿಂದ ಸೋಲು ಕಂಡಿದೆ.