ಕಲ್ಲಿಕೋಟೆಗೆ ಯುನೆಸ್ಕೋ ಸಾಹಿತ್ಯ ನಗರಿ ಪಟ್ಟ

| Published : Jun 24 2024, 11:01 AM IST

calicut

ಸಾರಾಂಶ

ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿರುವ ಕೇರಳದ ಉತ್ತರ ಭಾಗದಲ್ಲಿರುವ ಕಲ್ಲಿಕೋಟೆಯನ್ನು ‘ಸಾಹಿತ್ಯ ನಗರ’ ಎಂದು ಯುನೆಸ್ಕೋ ಅಧಿಕೃತವಾಗಿ ಘೋಷಿಸಿದೆ.

ಕಲ್ಲಿಕೋಟೆ: ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿರುವ ಕೇರಳದ ಉತ್ತರ ಭಾಗದಲ್ಲಿರುವ ಕಲ್ಲಿಕೋಟೆಯನ್ನು ‘ಸಾಹಿತ್ಯ ನಗರ’ ಎಂದು ಯುನೆಸ್ಕೋ ಅಧಿಕೃತವಾಗಿ ಘೋಷಿಸಿದೆ.

ಯುನೆಸ್ಕೋದ ಸೃಜನಶೀಲ ನಗರಗಳ ಸಾಹಿತ್ಯ ವಿಭಾಗದಲ್ಲಿ ಕಲ್ಲಿಕೋಟೆ 2023ರಲ್ಲಿ ಸ್ಥಾನ ಪಡೆದುಕೊಂಡಿದ್ದು, ಈ ಸಾಧನೆಯ ಬಗ್ಗೆ ರಾಜ್ಯ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಸಚಿವ ಎಂ. ಬಿ ರಾಜೇಶ್ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರೆ. ಕಲ್ಲಿಕೋಟೆಯನ್ನು ಮಾನವೀಯತೆ, ಸಾಮರಸ್ಯ, ನ್ಯಾಯ ಹಾಗೂ ವಾಕ್‌ ಸ್ವಾತಂತ್ರ್ಯದ ಗುಣಗಳಿರುವ ಆತ್ಮ ಎಂದು ಅವರು ಬಣ್ಣಿಸಿದ್ದಾರೆ. ಜೊತೆಗೆ ಕಲ್ಲಿಕೋಟೆಯ ನಗರ ಪಾಲಿಕೆ ಇದರಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದಿದ್ದಾರೆ.

ಇದರೊಂದಿಗೆ ಬರುವ ವರ್ಷದಿಂದ ಜ.23ರನ್ನು ಸಾಹಿತ್ಯ ನಗರದ ದಿನ ಎಂದು ಆಚರಿಸಲು ರಾಜ್ಯ ಸರ್ಕಾರ ಘೋಷಿಸಿದೆ.

ಅರ್ಹತೆ ಏನು?:

ಸಂಖ್ಯೆ, ಗುಣಮಟ್ಟ ಮತ್ತು ವೈವಿಧ್ಯಮಯ ಪುಸ್ತಕಗಳು ನಗರದಲ್ಲಿ ಪ್ರಕಟವಾಗುತ್ತಿರಬೇಕು. ಸ್ಥಳೀಯ ಮತ್ತು ವಿದೇಶಿ ಸಾಹಿತ್ಯಗಳ ಕುರಿತು ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮ ನಡೆಯುತ್ತಿರಬೇಕು. ಸಾಹಿತ್ಯ, ನಾಟಕ, ಕಾವ್ಯ ಮೊದಲಾದ ವಿಷಯಗಳಿಗೆ ನಗರದಲ್ಲಿ ಮನ್ನಣೆ ಸಿಗುತ್ತಿರಬೇಕು. ಸಾಹಿತ್ಯ ಬೆಳವಣಿಗೆಗೆ ಅನುಗುಣವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರಬೇಕು. ಇಂಥ ಬೆಳವಣಿಗೆಯಲ್ಲಿ ಪ್ರಕಾಶಕ ವಲಯ ಸಕ್ರಿಯವಾಗಿರಬೇಕು. ವಿದೇಶಿ ಸಾಹಿತ್ಯವನ್ನು ಪ್ರಾದೇಶಿಕ ಭಾಷೆಗೆ ಭಾಷಾಂತರ ಮಾಡುವ ಕೆಲಸ ನಡೆಯುತ್ತಿರಬೇಕು. ಇಂಥ ಚಟುವಟಿಕೆಗೆ ಸಾಂಪ್ರದಾಯಿಕ ಮತ್ತು ಹೊಸ ಮಾಧ್ಯಮಗಳಲ್ಲಿ ಪ್ರೋತ್ಸಾಹ ಸಿಗುತ್ತಿರಬೇಕು. ಇಂಥ ಮಾನದಂಡ ಪೂರೈಸಿದ ನಗರಗಳಲ್ಲಿ ಯುನೆಸ್ಕೋ ಸಾಹಿತ್ಯ ನಗರ ಎಂದು ಘೋಷಿಸಲಾಗುತ್ತದೆ.

2004ರಲ್ಲಿ ಯುನೆಸ್ಕೋ ಇಂಥದ್ದೊಂದು ಯೋಜನೆ ಆರಂಭಿಸಿದ್ದು ಇದುವರೆಗೆ ವಿಶ್ವದ 6 ಖಂಡಗಳ, 39 ದೇಶಗಳ 55 ನಗರಗಳು ಈ ಸ್ಥಾನ ಪಡೆದಿವೆ. ಈವರೆಗೆ ಏಷ್ಯಾಖಂಡದಲ್ಲಿ ಕಲ್ಲಿಕೋಟೆ ಸೇರಿ ಕೇವಲ 8 ನಗರಗಳು ಈ ಮಾನ್ಯತೆ ಪಡೆದುಕೊಂಡಿವೆ.