ಸಾರಾಂಶ
ಪಟನಾ: ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ರಾಜ್ಯದ ಜನತೆಗೆ ಸಿಎಂ ನಿತೀಶ್ ಕುಮಾರ್ ಮತ್ತೊಂದು ಬಂಪರ್ ಕೊಡುಗೆ ಘೋಷಿಸಿದ್ದಾರೆ. ಕರ್ನಾಟಕದ ಗೃಹಜ್ಯೋತಿ ಮಾದರಿಯಲ್ಲಿ, ಬಿಹಾರದ ಎಲ್ಲಾ ಮನೆಗಳಿಗೆ ಪ್ರತಿ ತಿಂಗಳು 125 ಯುನಿಟ್ ತನಕ ಉಚಿತ ವಿದ್ಯುತ್ ನೀಡುವುದಾಗಿ ಪ್ರಕಟಿಸಿದ್ದಾರೆ.
ಆ.1 ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ. ಇದರಿಂದ ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಟಿಸಿದ್ದಾರೆ. ಇದಲ್ಲದೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯಾದ್ಯಂತ ಬಡವರ ಮನೆ ಮೇಲೆ ಅಥವಾ ಸಮೀಪದ ಸ್ಥಳಗಳಲ್ಲಿ ಸೌರಫಲಕ ಅಳವಡಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಿದೆ. ಇದರ ಪೂರ್ತಿ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ನಿತೀಶ್ ಸರ್ಕಾರಿ ಉದ್ಯೋಗಗಳಲ್ಲಿ ಶೇ.35ರಷ್ಟು ಮಹಿಳಾ ಮೀಸಲನ್ನು ಸ್ಥಳೀಯರಿಗೆ ಮಾತ್ರ ಸೀಮಿತ ಮಾಡುವ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸಲು ಹೊಸ ಯೋಜನೆ ಘೋಷಿಸಿದ್ದರು.
ಈಗಾಗಲೇ ಪ್ರತಿ ತಿಂಗಳು ಕರ್ನಾಟಕದಲ್ಲಿ (200 ಯುನಿಟ್), ದೆಹಲಿ (200 ಯುನಿಟ್), ಜಾರ್ಖಂಡ್ (125 ಯುನಿಟ್), ರಾಜಸ್ಥಾನ (300 ಯುನಿಟ್), ಪಂಜಾಬ್ (300 ಯುನಿಟ್)ನಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ನಮ್ಮ ಗ್ಯಾರಂಟಿದೇಶಕ್ಕೇ ಮಾದರಿನಮ್ಮ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಸೇರಿ ಬಿಜೆಪಿಯ ಎಲ್ಲ ನಾಯಕರು ಟೀಕೆ ಮಾಡಿದ್ದರು. ಈಗ ಗ್ಯಾರಂಟಿ ಯೋಜನೆಗಳ ಮಾದರಿಯನ್ನು ಇಡೀ ದೇಶ ಪಾಲಿಸುತ್ತಿದೆ.
- ಡಿ.ಕೆ. ಶಿವಕುಮಾರ್, ಕರ್ನಾಟಕ ಡಿಸಿಎಂ