ಜೈಲಿಂದಲೇ ಅರವಿಂದ ಕೇಜ್ರಿವಾಲ್‌ ಮೊದಲ ಆದೇಶ

| Published : Mar 25 2024, 12:53 AM IST / Updated: Mar 25 2024, 07:51 AM IST

arvind kejrival

ಸಾರಾಂಶ

ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತರಾದರೂ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದ ಅರವಿಂದ ಕೇಜ್ರಿವಾಲ್‌, ಜಾರಿ ನಿರ್ದೇಶನಾಲಯದ (ಇ.ಡಿ.) ವಶದಲ್ಲಿರುವಾಗಲೇ ಕಾರ್ಯಾದೇಶವೊಂದನ್ನು ಹೊರಡಿಸಿದ್ದಾರೆ.

ನವದೆಹಲಿ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತರಾದರೂ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದ ಅರವಿಂದ ಕೇಜ್ರಿವಾಲ್‌, ಜಾರಿ ನಿರ್ದೇಶನಾಲಯದ (ಇ.ಡಿ.) ವಶದಲ್ಲಿರುವಾಗಲೇ ಕಾರ್ಯಾದೇಶವೊಂದನ್ನು ಹೊರಡಿಸಿದ್ದಾರೆ. 

ದೆಹಲಿ ನೀರು ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ‘ಜೈಲುಪಾಲಾಗಿದ್ದರೂ ರಾಜೀನಾಮೆ ನೀಡಲ್ಲ. ಜೈಲಿಂದಲೇ ಆಡಳಿತ ನಡೆಸುವೆ’ ಎಂದು ಕೇಜ್ರಿವಾಲ್‌ ಮೊನ್ನೆ ಹೇಳಿದ್ದರು. ಅದನ್ನು ಅವರು ಈಗ ಕಾರ್ಯರೂಪಕ್ಕೆ ತಂದಿದ್ದಾರೆ.

ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವೆ ಆತಿಷಿ, ‘ನಗರದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಕೊಳಚೆ ನೀರಿನ ಸಮಸ್ಯೆ ಎದುರಾಗಿದೆ. 

ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಹೆಚ್ಚುವರಿ ಟ್ಯಾಂಕರ್‌ಗಳನ್ನು ನಿಯೋಜಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಶನಿವಾರ ರಾತ್ರಿ ಕೇಜ್ರಿವಾಲ್‌ ಇ.ಡಿ. ವಶದಿಂದಲೇ ಲಿಖಿತ ಆದೇಶ ಹೊರಡಿಸಿ ತಮಗೆ ಹಸ್ತಾಂತರಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಅಲ್ಲದೆ ಅಗತ್ಯಬಿದ್ದರೆ ಈ ವಿಷಯದಲ್ಲಿ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರ ನೆರವನ್ನು ಪಡೆಯುವಂತೆಯೂ ಕೇಜ್ರಿವಾಲ್‌ ಸೂಚಿಸಿದ್ದಾರೆ. ವಿಶೇಷವೆಂದರೆ ಮದ್ಯ ಹಗರಣದಲ್ಲಿ ಸಿಬಿಐ ತನಿಖೆಗೆ ಆದೇಶಿಸಿ ಕೇಜ್ರಿವಾಲ್‌ ಜೈಲಿಗೆ ಹೋಗಲು ಕಾರಣವಾಗಿದ್ದೇ ವಿ.ಕೆ.ಸಕ್ಸೇನಾ.

ಕಣ್ಣೀರು ತರಿಸಿತು- ಆತಿಶಿ: ತಾವು ಸಂಕಷ್ಟದಲ್ಲಿದ್ದರೂ ಜನರ ಸಮಸ್ಯೆಗೆ ಸ್ಪಂದಿಸುವ ಕೇಜ್ರಿವಾಲ್‌ ಅವರ ಕಾಳಜಿ ನನ್ನ ಕಣ್ಣಲ್ಲಿ ನೀರು ತರಿಸುತ್ತಿದೆ ಎಂದು ತಮ್ಮ ನಾಯಕನನ್ನು ಆತಿಷಿ ಹೊಗಳಿದ್ದಾರೆ.

ಬಂಧನ ಖಂಡಿಸಿ 31ಕ್ಕೆ ಇಂಡಿಯಾ ಪ್ರತಿಭಟನೆದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನ ಖಂಡಿಸಿ ಮಾ.31ರಂದು ‘ಇಂಡಿಯಾ’ ಕೂಟ ರಾಮಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ. ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಸೀಜ್‌ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಲು ನಿರ್ಧರಿಸಿದೆ.

ಕೇಜ್ರಿ ಕಾರ್ಯಾದೇಶ ನಕಲಿ ಪತ್ರ: ಬಿಜೆಪಿಜೈಲಿನಿಂದಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೊರಡಿಸಿದ ಕಾರ್ಯಾದೇಶದ ಪತ್ರ ನಕಲಿ ಎಂದು ಬಿಜೆಪಿ ಆರೋಪಿಸಿದೆ. 

ಇಂತಹ ಆದೇಶಗಳನ್ನು ಮುಖ್ಯ ಕಾರ್ಯದರ್ಶಿ ಮೂಲಕ ಹೊರಡಿಸಿ, ಉಪರಾಜ್ಯಪಾಲರ ಅನುಮತಿ ಪಡೆಯಬೇಕು. ಈ ಎರಡೂ ಕಾರ್ಯ ಆಗಿಲ್ಲ ಎಂದು ದೂಷಿಸಿದೆ.