ಸಾರಾಂಶ
ನವದೆಹಲಿ: ಮದ್ಯ ಲೈಸೆನ್ಸ್ ಹಂಚಿಕೆ ಪ್ರಕರಣದಲ್ಲಿ ಅಕ್ರಮ ಎಸಗಿರುವ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂದಿನ ವಾರದಿಂದ ಜೈಲಿಗೆ ತಲಾ ಇಬ್ಬರು ಸಚಿವರನ್ನು ಕರೆಸಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಈ ಮೂಲಕ ಅಲ್ಲಿಂದಲೇ ಅಧಿಕೃತ ರಾಜ್ಯಭಾರ ಆರಂಭಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಪ್ರಕಟಿಸಿದೆ.
ಈವರೆಗೆ ಕೇಜ್ರಿವಾಲ್ ಕೆಲವು ಸರ್ಕಾರಿ ಕಾಗದ ಪತ್ರಗಳಿಗೆ ಜೈಲಿನಿಂದಲೇ ಸಹಿ ಮಾಡಿದ್ದರು ಎಂದು ವರದಿಯಾಗಿದ್ದವು. ಆದರೆ ಜೈಲಲ್ಲಿ ಅವರು ಸಚಿವರನ್ನು ಕರೆಸಿಕೊಂಡು ಸಭೆ ನಡೆಸಿರಲಿಲ್ಲ. ಕೇಜ್ರಿವಾಲ್ ಸಚಿವರ ಜತೆ ಸಭೆ ನಡೆಸಲು ನಿಧರಿಸಿರುವುದು ಇದೇ ಮೊದಲ ಬಾರಿಯಾಗಿದೆ.
ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್, ‘ಅರವಿಂದ್ ಕೇಜ್ರಿವಾಲ್ ಮುಂದಿನ ವಾರದಿಂದ ದೆಹಲಿಯ ತಲಾ ಇಬ್ಬರು ಸಚಿವರನ್ನು ಕರೆಸಿ ಅವರ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಅಗತ್ಯ ನಿರ್ದೇಶನಗಳನ್ನೂ ನೀಡಲಿದ್ದಾರೆ. ಇದರೊಂದಿಗೆ ಜೈಲಿನಿಂದಲೇ ಅರವಿಂದ್ ಕೇಜ್ರಿವಾಲ್ ಆಡಳಿತ ನಡೆಸಲು ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಆಮ್ ಆದ್ಮಿ ಪಕ್ಷ ಮಾಡಿಕೊಳ್ಳಲಿದೆ’ ಎಂದು ತಿಳಿಸಿದರು.
ಸಹಿ ಹಾಕುವ ಅಧಿಕಾರವಿಲ್ಲ- ಕಾರಾಗೃಹ ಡಿಜಿ:
ಆದರೆ ಕೇಜ್ರಿವಾಲ್ ಅವರಿಗೆ ಸರ್ಕಾರಿ ಕಾಗದಪತ್ರಗಳಿಗೆ ಜೈಲಿನಲ್ಲಿ ಸಹಿ ಹಾಕುವ ಅಧಿಕಾರ ಇರದು ಎಂದು ದಿಲ್ಲಿ ಕಾರಾಗೃಹ ಡಿಜಿ ಸಂಜಯ ಬನ್ಸಲ್ ಹೇಳಿದ್ದಾರೆ.
ಪಿಟಿಐಗೆ ಸಂದರ್ಶನ ನೀಡಿದ ಅವರು, ‘ಅರವಿಂದ್ ಕೇಜ್ರಿವಾಲ್ ಅವರು ಸಚಿವರನ್ನು ಕರೆಸಿ ಪ್ರಗತಿ ಪರಿಶೀಲನೆ ನಡೆಸಿ ನಿರ್ದೇಶನಗಳನ್ನು ನೀಡಬಹುದಾದರೂ ರಾಜಕೀಯ ಸಂಬಂಧಿ ಪತ್ರಗಳಿಗೆ ಸಹಿ ಹಾಕುವ ಅಧಿಕಾರ ಇರುವುದಿಲ್ಲ. ಒಬ್ಬ ವ್ಯಕ್ತಿ ನ್ಯಾಯಾಂಗ ಬಂಧನದಲ್ಲಿರುವ ಸಮಯದಲ್ಲಿ ತನ್ನ ಪ್ರಕರಣಕ್ಕೆ ಸಂಬಂಧಿಸಿದ ಪತ್ರಗಳು, ತನ್ನ ಖಾಸಗಿ ಪತ್ರಗಳು ಮತ್ತು ರಾಜಕೀಯೇತರ ಪತ್ರಗಳಿಗೆ ಮಾತ್ರ ಸಹಿ ಹಾಕಬಹುದಾಗಿದೆ’ ಎಂದು ಸ್ಪಷ್ಟಪಡಿಸಿದರು.
ಸುಪ್ರೀಂಕೋರ್ಟಲ್ಲಿ ಕೇಜ್ರಿಗಿಲ್ಲ ರಿಲೀಫ್
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇ.ಡಿ. ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ. 2 ವಾರಗಳ ನಂತರ (ಏಪ್ರಿಲ್ 29) ವಿಚಾರಣೆ ನಡೆಸುವುದಾಗಿ ಹೇಳಿದೆ. ಹೀಗಾಗಿ ಸುಪ್ರೀಂಕೋರ್ಟಿಂದ ತಮಗೆ ಸಮಾಧಾನ ಸಿಗಬಹುದು ಎಂಬ ಆಸೆ ಹೊಂದಿದ್ದ ಕೇಜ್ರಿವಾಲ್‌ಗೆ ನಿರಾಸೆಯಾಗಿದೆ.