ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಅರ್ಶ್ ಡಲ್ಲಾ ಎಂದು ಕರೆಯಲ್ಪಡುವ ಅರ್ಶ್‌ದೀಪ್ ಸಿಂಗ್‌ ಬಂಧನ

| Published : Nov 11 2024, 01:03 AM IST / Updated: Nov 11 2024, 04:50 AM IST

ಸಾರಾಂಶ

ಖಲಿಸ್ತಾನಿ ಉಗ್ರರ ವಿಷಯದಲ್ಲಿ ಭಾರತ-ಕೆನಡಾ ಸಂಬಂಧ ಹಳಸಿರುವ ನಡುವೆಯೇ ಕೆನಡಾ ಪೊಲೀಸರು ಭಾನುವಾರ ಅರ್ಶ್ ಡಲ್ಲಾ ಎಂದು ಕರೆಯಲ್ಪಡುವ ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ಸಿಂಗ್‌ನನ್ನು ಬಂಧಿಸಿದ್ದಾರೆ.

ಒಟ್ಟಾವಾ: ಖಲಿಸ್ತಾನಿ ಉಗ್ರರ ವಿಷಯದಲ್ಲಿ ಭಾರತ-ಕೆನಡಾ ಸಂಬಂಧ ಹಳಸಿರುವ ನಡುವೆಯೇ ಕೆನಡಾ ಪೊಲೀಸರು ಭಾನುವಾರ ಅರ್ಶ್ ಡಲ್ಲಾ ಎಂದು ಕರೆಯಲ್ಪಡುವ ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ಸಿಂಗ್‌ನನ್ನು ಬಂಧಿಸಿದ್ದಾರೆ.

ಭಾರತಕ್ಕೆ ಬೇಕಾದ ಉಗ್ರನಾದ ಡಲ್ಲಾ, ಹತ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನ ಉತ್ತರಾಧಿಕಾರಿಯಂತೆ ಬಿಂಬಿತನಾಗಿದ್ದ ಹಾಗೂ ಖಲಿಸ್ತಾನಿ ಟೈಗರ್ ಫೋರ್ಸ್‌ನ ಹಂಗಾಮಿ ಮುಖ್ಯಸ್ಥರಾಗಿದ್ದ. ಕಳೆದ ತಿಂಗಳು ಕೆನಡಾದ ಮಿಲ್ಟನ್ ಟೌನ್‌ ಎಂಬಲ್ಲಿ ನಡೆದ ಶೂಟೌಟ್‌ನಲ್ಲಿ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ಡಲ್ಲಾನನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಭಾರತದಲ್ಲಿ ವಿವಿಧ ಅಪರಾಧ ಚಟುವಟಿಕೆಗಳಿಗೆ ಬೇಕಾಗಿರುವ ಅರ್ಶ್ ಡಲ್ಲಾ ತನ್ನ ಪತ್ನಿ ಜತೆ ಕೆನಡಾದಲ್ಲಿ ವಾಸಿಸುತ್ತಿದ್ದಾನೆ. ಭಾರತೀಯ ಅಧಿಕಾರಿಗಳು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಹೆಚ್ಚಿನ ವಿವರಕ್ಕೆ ಕೆನಡಾ ಅಧಿಕಾರಿಗಳ ಜತೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಕೆನಡಾ ದೇಗುಲದ ಬಳಿ ಹಿಂದೂಗಳ ಮೇಲೆ ದಾಳಿ: ಎಎಫ್‌ಜೆ ಸಂಯೋಜಕ ಸೆರೆ

ಓಟ್ಟಾವ: ಕೆನಾಡದ ಬ್ರಾಂಪ್ಟನ್‌ನಲ್ಲಿ ಇತ್ತೀಚೆಗೆ ಹಿಂದೂ ದೇಗುಲದ ಬಳಿ ನಡೆದ ಹಿಂಸಾಚಾರ ಪ್ರಕರಣ ಸಂಬಂಧ, ಭಾರತದಿಂದ ನಿಷೇಧಕ್ಕೆ ಒಳಗಾಗಿರುವ ಸಿಖ್‌ ಫಾರ್ ಜಸ್ಟಿಸ್ ಸಂಘಟನೆಯ ಕಾರ್ಯಕರ್ತ ಇಂದ್ರಜಿತ್‌ ಗೋಶಾಲ್‌ ಎಂಬಾತನನ್ನು ಬಂಧಿಸಲಾಗಿದೆ. ಆಯುಧ ಬಳಸಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗೋಶಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.