ಸಾರಾಂಶ
ನವದೆಹಲಿ: ಆಹಾರ ಪದಾರ್ಥ ಪೊಟ್ಟಣಗಳ ಮೇಲೆ ಜನರನ್ನು ಆಕರ್ಷಿಸುವ ಸಲುವಾಗಿ ತಯಾರಕರು ಕೆಲವು ಮಾಹಿತಿಯನ್ನು ಮುಚ್ಚಿಡುವ ಸಾಧ್ಯತೆಯಿದ್ದು, ಜನತೆ ಎಚ್ಚರದಿಂದ ಅವುಗಳನ್ನು ಖರೀದಿಸಬೇಕು ಎಂಬುದಾಗಿ ಐಸಿಎಂಆರ್ ಅಂಗಸಂಸ್ಥೆ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್) ತಿಳಿಸಿದೆ.
ಈ ಕುರಿತು ಸಂಸ್ಥೆಯ ಹಿರಿಯ ನಿರ್ದೇಶಕರಾದ ಡಾ. ಹೇಮಲತಾ ಕೆಲವು ನಿರ್ದೇಶನಗಳನ್ನು ಸಿದ್ಧಪಡಿಸಿದ್ದು, ಜನತೆಗೆ ಉದಾಹರಣೆ ಸಮೇತ ಕೆಲವು ಆಹಾರ ತಯಾರಕರು ನೀಡುತ್ತಿರುವ ಅಪೂರ್ಣ ಮಾಹಿತಿಯ ಕುರಿತು ಎಚ್ಚರದಿಂದಿರುವಂತೆ ತಿಳಿಸಲಾಗಿದೆ.
ಉದಾಹರಣೆಗೆ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿದೆ ಎಂಬುದನ್ನು ಆಹಾರ ಪದಾರ್ಥಗಳಲ್ಲಿ 1-2 ನೈಸರ್ಗಿಕ ಪದಾರ್ಥ ಬಳಕೆಯಾಗಿದ್ದರೂ ಸಾರ್ವತ್ರಿಕವಾಗಿ ಬಳಸಲಾಗುತ್ತದೆ. ಇದೇ ರೀತಿ ಹಣ್ಣಿನ ರಸ ಎಂಬುದಾಗಿ ಪರಿಗಣಿಸಲು ಆಹಾರ ಪದಾರ್ಥದಲ್ಲಿ ಕನಿಷ್ಠ ಶೇ.10ರಷ್ಟು ಹಣ್ಣಿನ ರಸ ಬಳಸಿರಬೇಕು ಎಂಬ ನಿಯಮವಿದೆ.
ಆದರೆ ಅಷ್ಟು ಪ್ರಮಾಣದ ಹಣ್ಣಿನ ರಸ ಬಳಸುವ ಜೊತೆಗೆ ಸಕ್ಕರೆ ಸೇರಿದಂತೆ ಇತರ ಪದಾರ್ಥಗಳನ್ನೂ ಬಳಸಿರುವ ಸಾಧ್ಯತೆಯಿದ್ದು, ರೋಗಿಗಳಿಗೆ ಇದು ಹಾನಿಕಾರಕವಾಗುವ ಸಂಭವವಿದೆ.ಹಾಗೆಯೇ ಸಾವಯವ ಪದಾರ್ಥ ಎಂದು ಉಲ್ಲೇಖಿಸಲು ಪದಾರ್ಥಕ್ಕೆ ಯಾವುದೇ ರೀತಿಯ ಕೃತಕ ಲೇಪನ ಮಾಡಿರಬಾರದು ಮತ್ತು ಬೆಳೆಯುವಾಗ ಕೀಟನಾಶಕಗಳನ್ನು ಬಳಸಿರಬಾರದು. ಆಗ ಮಾತ್ರ ಜೈವಿಕ್ ಭಾರತ್ ಲೋಗೋ ಹಾಕಿಕೊಳ್ಳಲು ಅವಕಾಶವಿದೆ.
ಕೆಲವೊಮ್ಮೆ ಆಹಾರ ಪೊಟ್ಟಣದಲ್ಲಿ ಪದಾರ್ಥಗಳ ಪ್ರಮಾಣವನ್ನು ಉಲ್ಲೇಖಿಸಿರುವುದೇ ಇಲ್ಲ. ಕಡಿಮೆ ಸಕ್ಕರೆ, ಕಡಿಮೆ ಕ್ಯಾಲೋರಿ ಎಂದು ಮಾತ್ರ ಬಳಸಲಾಗುತ್ತದೆ. ಬದಲಾಗಿ ಅಂಕಿಗಳಲ್ಲಿ ನಿರ್ದಿಷ್ಟ ಪ್ರಮಾಣವನ್ನು ಉಲ್ಲೇಖಿಸಬೇಕು. ಜೊತೆಗೆ ಕೆಲವೊಮ್ಮೆ ಪ್ರಮಾಣವನ್ನು 100 ಗ್ರಾಂ/ಎಂಎಲ್‌ಗೆ ಸೂಚಿಸಿ ಪೊಟ್ಟಣದಲ್ಲಿ ಆಹಾರ ಪದಾರ್ಥ ಅಧಿಕ ಪ್ರಮಾಣದ್ದಾಗಿದ್ದಾಗ ಅದಕ್ಕೆ ಹಾಕಿರುವ ಪೌಷ್ಟಿಕಾಂಶಗಳೂ ಬದಲಾಗುತ್ತವೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ತಿಳಿಸಿದೆ.