ನವದೆಹಲಿ: ನಟ ರಣವೀರ್‌ ಸಿಂಗ್‌ ಮತ್ತು ನಿರ್ಮಾಪಕ ರೋಹಿತ್‌ ಶೆಟ್ಟಿಗೆ ಭೂಗತ ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಮತ್ತೆ ಬೆದರಿಕೆ ಹಾಕಿದೆ. ಇತ್ತೀಚೆಗೆ ರೋಹಿತ್‌ರ ಜುಹು ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ತಂಡ, ಮತ್ತೊಂದೆಡೆ ಹಣಕ್ಕಾಗಿ ರಣ್‌ವೀರ್‌ಗೆ ವಾಟ್ಸಾಪ್‌ ಸಂದೇಶ ರವಾನಿಸಿತ್ತು. ಈ ಕುರಿತು ಇಬ್ಬರೂ ದೂರು ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಬಿಷ್ಣೋಯಿ ಗ್ಯಾಂಗ್‌ನ ಹ್ಯಾರಿ ಬಾಕ್ಸರ್‌ ಆಡಿಯೋ ಸಂದೇಶ ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ರಣವೀರ್‌ ಉಲ್ಲೇಖಿಸಿ, ‘ನೀವು ಪೊಲೀಸಿರಿಗೆ ದೂರು ಸಲ್ಲಿಸಿದ್ದೀರಿ. ಈ ಬಗ್ಗೆ ತೊಂದರೆ ಏನಿಲ್ಲ. ಆದರೆ ಈಗ ಗಮನವಿಟ್ಟು ಕೇಳಿ, ನಿಮ್ಮೊಂದಿಗೆ ಕೆಲಸ ಮಾಡುವ ಮ್ಯಾನೇಜರ್‌ ಸೇರಿದಂತೆ ಪ್ರತಿಯೊಬ್ಬರ ಸಂಪೂರ್ಣ ವಿವರಗಳು ನಮ್ಮಲ್ಲಿವೆ . ಅವರ ನಿವಾಸ, ಕುಟುಂಬ, ದಿನಚರಿಗಳ ಬಗ್ಗೆ ಗೊತ್ತು. ನಿಮ್ಮ ಸಂಪೂರ್ಣ ಸಿಬ್ಬಂದಿ ಕೊಲ್ಲುತ್ತೇವೆ’ ಎಂದಿದ್ದಾನೆ. ಇದೇ ವೇಳೆ ರೋಹಿತ್‌ ಶೆಟ್ಟಿಗೆ ಇದನ್ನು ಜಾಗರೂಕವಾಗಿ ಕೇಳಿಸಿಕೊಳ್ಳಿ ಎಂದಿದ್ದಾನೆ.

==

ವೆನಿಜುವೆಲಾ ತೈಲ ಆಮದಿಗೆ ರಿಲಯನ್ಸ್‌ಗೆ ಅಮೆರಿಕ ಓಕೆ

ನವದೆಹಲಿ: ಮುಖೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ವೆನಿಜುವೆಲಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲವನ್ನು ನೇರವಾಗಿ ಖರೀದಿಸಲು ಅಮೆರಿಕದಿಂದ ಸಾಮಾನ್ಯ ಪರವಾನಗಿ ಪಡೆದುಕೊಂಡಿದೆ. ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್‌ ಕಂಪನಿಯು ಯಾವುದೇ ನಿಯಮಗಳಿಲ್ಲದೆ ನೇರವಾಗಿ ವೆನಿಜುವೆಲಾದಿಂದ ತೈಲ ಖರೀದಿಸುವ ಅಂತಾರಾಷ್ಟ್ರೀಯ ಕಂಪನಿಯಾಗಿ ಲೈಸೆನ್ಸ್‌ ಪಡೆದುಕೊಂಡಿದೆ. 2019- 20ರಲ್ಲಿ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೋ ಸರ್ಕಾರದ ಮೇಲೆ ಅಮೆರಿಕ ನಿರ್ಬಂಧ ವಿಧಿಸುವ ಮುನ್ನ ರಿಲಯನ್ಸ್‌ ಕಂಪನಿ ನಿಯಮಿತವಾಗಿ ವೆನಿಜುವೆಲಾದಿಂದ ತೈಲ ಖರೀದಿಸುತ್ತಿತ್ತು.


==

ಅಮೆರಿಕ ಹಣದುಬ್ಬರ ಭೀತಿ, ಆ್ಯಂಥ್ರೋಪಿಕ್ಸ್‌ ಶಾಕ್‌ಗೆ ಸೆನ್ಸೆಕ್ಸ್‌ 1048 ಅಂಕ ಕುಸಿತ

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 1048 ಅಂಕಗಳ ಭಾರೀ ಕುಸಿತ ಕಂಡು 82626 ಅಂಕಗಳಲ್ಲಿ ಮತ್ತು ನಿಫ್ಟಿ 336 ಅಂಕ ಕುಸಿದು 25471 ಅಂಕಗಳಲ್ಲಿ ಮುಕ್ತಾಯವಾಗಿದೆ. ಜಾಗತಿಕ ಷೇರುಪೇಟೆ ಕುಸಿತದ ಪ್ರಭಾವ, ಅಮೆರಿಕದ ಹಣದುಬ್ಬರ ವರದಿ ಬಿಡುಗಡೆ ಆತಂಕ ಮತ್ತು ಆ್ಯಂಥ್ರೋಪಿಕ್ಸ್‌ ಕಂಪನಿ ಜಾಗತಿಕ ಐಟಿ ವಲಯದಲ್ಲಿ ಹುಟ್ಟುಹಾಕಿರುವ ಆತಂಕ, ಕೆಲವು ಕಂಪನಿಗಳ ತ್ರೈಮಾಸಿಕ ವರದಿ ನಿರಾಶಾದಾಯಕವಾಗಿರುವುದು ಷೇರುಪೇಟೆಯ ಪತನಕ್ಕೆ ಕಾರಣವಾಗಿದೆ. ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 7 ಲಕ್ಷ ಕೋಟಿ ರು.ನಷ್ಟು ಕರಗಿಹೋಗಿದೆ.

==

9 ವರ್ಷದಲ್ಲಿ ದೇಶದ ಹಾಲಿ ನ್ಯಾಯಾಧೀಶರ ವಿರುದ್ಧ ಸಿಜೆಐಗೆ 8,600 ದೂರು!

ನವದೆಹಲಿ: 2016ರಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಗೆ ಹಾಲಿ ನ್ಯಾಯಾಧೀಶರ ವಿರುದ್ಧ 8,600ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಲೋಕಸಭೆಗೆ ಕಾನೂನು ಸಚಿವ ರಾಮ್‌ ಮೇಘವಾಲ್‌ ಶುಕ್ರವಾರ ಮಾಹಿತಿ ನೀಡಿದ್ದಾರೆ. ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಅವರು, ‘2016 ರಿಂದ 2025ರ ನಡುವೆ ದೇಶದ ಹಾಲಿ ನ್ಯಾಯಾಧೀಶರ ವಿರುದ್ಧ ಸಿಜೆಐ ಕಚೇರಿಗೆ 8,639 ದೂರುಗಳು ಬಂದಿವೆ. 2024ರಲ್ಲಿ ಅತಿ ಹೆಚ್ಚು ದೂರುಗಳು (1,170) ಬಂದಿವೆ’ ಎಂದು ತಿಳಿಸಿದ್ದಾರೆ.