ಸಾರಾಂಶ
ಸೋಮವಾರ ಗದ್ದಲದ ನಡುವೆಯೂ ಆದಾಯ ತೆರಿಗೆಗೆ ಸಂಬಂಧಿಸಿದ 2 ಪರಿಷ್ಕೃತ ಮಸೂದೆಗಳನ್ನು ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆದಾಯ ತೆರಿಗೆ(2) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳು ಅಂಗೀಕಾರವಾದವು.
ನವದೆಹಲಿ : ಸೋಮವಾರ ಗದ್ದಲದ ನಡುವೆಯೂ ಆದಾಯ ತೆರಿಗೆಗೆ ಸಂಬಂಧಿಸಿದ 2 ಪರಿಷ್ಕೃತ ಮಸೂದೆಗಳನ್ನು ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆದಾಯ ತೆರಿಗೆ(2) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳು ಅಂಗೀಕಾರವಾದವು. ಸಲ್ಲಿಕೆ ಅವಧಿ ಮುಗಿದರೂ ದಂಡವಿಲ್ಲದೆ ಟಿಡಿಎಸ್ ಕ್ಲೇಂ ಸಾಧ್ಯ ಆಗುವಂಥ ಹಲವು ತೆರಿಗೆದಾರ ಸ್ನೇಹಿ ಅಂಶಗಳು ಇದರಲ್ಲಿದೆ.
ಹೊಸ ಆದಾಯ ತೆರಿಗೆ(2) ಮಸೂದೆಯು, 1961ರ ಆದಾಯ ತೆರಿಗೆ ಕಾಯ್ದೆಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡುವ ಕುರಿತಾಗಿದೆ. ಅತ್ತ ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಯು 1961ರ ಕಾಯ್ದೆ ಮತ್ತು 2025ರ ಹಣಕಾಸು ಕಾಯ್ದೆಗೆ ತಿದ್ದುಪಡಿ ತರುತ್ತದೆ.ಸೀತಾರಾಮನ್ ಅವರು ಶುಕ್ರವಾರ ಆದಾಯ ತೆರಿಗೆ ಮಸೂದೆ-2025ನ್ನು ಹಿಂಪಡೆದಿದ್ದು, ಸಂಸತ್ತಿನ ಆಯ್ಕೆ ಸಮಿತಿಯ ಸಲಹೆಗಳ ಅನ್ವಯ ಅದಕ್ಕೆ ಬದಲಾವಣೆ ಮಾಡಿ ಅದನ್ನೀಗ ಅಂಗೀಕರಿಸಲಾಗಿದೆ. ಇದು 2026ರ ಏ.1ರಿಂದ ಜಾರಿಗೆ ಬರಲಿದೆ.
ಏನೆಲ್ಲಾ ಬದಲಾವಣೆ?:
ಹೊಸ ಮಸೂದೆಯು ಪ್ರಸ್ತುತ ಇರುವ ಆದಾಯ ತೆರಿಗೆ ಕಾಯ್ದೆಯ ಗಾತ್ರ ಮತ್ತು ಸಂಕೀರ್ಣತೆಯನ್ನು ಕಡಿಮೆ ಮಾಡುತ್ತದೆ. 1961ರ ಆದಾಯ ತೆರಿಗೆ ಕಾಯ್ದೆಯು ಮತ್ತು ಐದು ಲಕ್ಷಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿತ್ತು. ಇದು ತುಂಬಾ ಜಟಿಲವಾಗಿತ್ತು. ಈಗ 4,000ಕ್ಕೂ ಹೆಚ್ಚು ತಿದ್ದುಪಡಿ ತಂದು ಹೊಸ ಮಸೂದೆಯು ಅದನ್ನು ಸುಮಾರು 50 ಪ್ರತಿಶತದಷ್ಟು ಸರಳಗೊಳಿಸುತ್ತದೆ.ಇದರಡಿಯಲ್ಲಿ ಧಾರ್ಮಿಕ ಮತ್ತು ದತ್ತಿ ಟ್ರಸ್ಟ್‌ಗಳಿಗೆ ದೇಣಿಗೆಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಮುಂದುವರಿಸಲು ಒಲವು ತೋರಲಾಗಿದೆ. ಜೊತೆಗೆ ತೆರಿಗೆದಾರರು ಯಾವುದೇ ದಂಡವನ್ನು ಪಾವತಿಸದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಂತಿಮ ದಿನಾಂಕದ ನಂತರವೂ ಟಿಡಿಎಸ್ ಮರುಪಾವತಿಯನ್ನು ಕ್ಲೈಮ್ ಮಾಡಲು ಅನುಮತಿಸಲಾಗಿದೆ.
ಹೊಸ ಮಸೂದೆಯಲ್ಲಿ ಸರ್ಕಾರವು, ಲಾಭರಹಿತ ಸಂಸ್ಥೆಗಳು (ಎನ್‌ಪಿಒ) ಶುದ್ಧ ಧಾರ್ಮಿಕ ಟ್ರಸ್ಟ್‌ಗಳಿಂದ ಸ್ವೀಕರಿಸುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ನೀಡಿದೆ. ಆದರೆ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಂತಹ ಇತರ ಕಾರ್ಯಗಳನ್ನು ಹೊಂದಿರುವ ಧಾರ್ಮಿಕ ಟ್ರಸ್ಟ್‌ನಿಂದ ಪಡೆದ ದೇಣಿಗೆಗಳಿಗೆ ತೆರಿಗೆ ವಿಧಿಸಲಾಗುವುದು.
ಹಣಕಾಸು ಸಂಸ್ಥೆಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಹಣಕಾಸು ಒದಗಿಸಿದರೆ, ಅವುಗಳ ಮೇಲೆ ಟಿಸಿಎಸ್ ವಿಧಿಸಲಾಗುವುದಿಲ್ಲ.
ತೆರಿಗೆಯಿಂದ ತಪ್ಪಿಸಿಕೊಂಡವರ ಪತ್ತೆಗೆ ಅಧಿಕಾರಿಗಳು ಬಾಗಿಲು, ಪೆಟ್ಟಿಗೆ, ಲಾಕರ್, ಅಲ್ಮೇರಾ, ಬೀಗವನ್ನು ಮುರಿಯಬಹುದು ಅಥವಾ ಯಾವುದೇ ಕಂಪ್ಯೂಟರ್ ಸಿಸ್ಟಮ್‌ಗೆ ಪ್ರವೇಶ ಕೋಡ್ ಪಡೆಯಬಹುದು.