ಸಾರಾಂಶ
ಕಳೆದ ವರ್ಷ ದೇಶದಲ್ಲೇ ಮೊದಲ ಬಾರಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದಿದ್ದ ಉತ್ತರಾಖಂಡ ಸರ್ಕಾರ, ಇದೀಗ ಶೈಕ್ಷಣಿಕ ಸುಧಾರಣೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ಮದರಸಾ ಶಿಕ್ಷಣ ಮಂಡಳಿಯನ್ನು ರದ್ದು
ಡೆಹ್ರಾಡೂನ್: ಕಳೆದ ವರ್ಷ ದೇಶದಲ್ಲೇ ಮೊದಲ ಬಾರಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದಿದ್ದ ಉತ್ತರಾಖಂಡ ಸರ್ಕಾರ, ಇದೀಗ ಶೈಕ್ಷಣಿಕ ಸುಧಾರಣೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ಮದರಸಾ ಶಿಕ್ಷಣ ಮಂಡಳಿಯನ್ನು ರದ್ದುಪಡಿಸಿ, ಮುಸ್ಲಿಂ ಸೇರಿದಂತೆ ಇತರ ಎಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊಸ ನಿಯಂತ್ರಣ ವ್ಯವಸ್ಥೆಯಡಿ ತರಲು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕಾಯ್ದೆ-2025ನ್ನು ಜಾರಿಗೆ ತಂದಿದೆ.
ರಾಜ್ಯಪಾಲ ಲೆ.ಜ. ಗುರ್ಮಿತ್ ಸಿಂಗ್ ಅವರು ಅಲ್ಪಸಂಖ್ಯಾತ ಶಿಕ್ಷಣ ಮಸೂದೆ-2025ಕ್ಕೆ ಅಂಕಿತ ಹಾಕುವ ಮೂಲಕ ಹೊಸ ಕಾಯ್ದೆ ಜಾರಿಗೆ ಬಂದಿದೆ. ಈ ಮೂಲಕ ಇದುವರೆಗೆ ಚಾಲ್ತಿಯಲ್ಲಿದ್ದ ಮದರಸಾ ಶಿಕ್ಷಣ ಮಂಡಳಿ ರದ್ದಾಗಲಿದೆ. ಇದರ ಬದಲು ಹೊಸ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ ಸ್ಥಾಪನೆಯಾಗಲಿದೆ.
ಕಾಯ್ದೆ ಹೇಳುವುದೇನು?:
ಹೊಸ ಕಾಯ್ದೆಯು ಮುಸ್ಲಿಂ, ಸಿಖ್ಖ್, ಜೈನ, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿಗಳು ನಡೆಸುವ ಶಾಲೆ-ಕಾಲೇಜುಗಳಿಗೆ ಅನ್ವಯವಾಗುತ್ತದೆ. ಈ ಸಂಸ್ಥೆಗಳು ಹೊಸ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರದಿಂದ (ಯುಎಸ್‌ಎಎಂಇ) ಅನುಮತಿ ಪಡೆಯಬೇಕು ಮತ್ತು ಉತ್ತರಾಖಂಡ ಶಾಲಾ ಶಿಕ್ಷಣ ಮಂಡಳಿಯೊಂದಿಗೆ (ಯುಬಿಎಸ್‌ಇ) ಸಂಯೋಜನೆಯಾಗಬೇಕು. 2026ರ ಜುಲೈನಿಂದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಆಧಾರದಲ್ಲಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು. ವಿಜ್ಞಾನ, ಗಣಿತ, ಸಮಾಜ ವಿಜ್ಞಾನದಂತಹ ಮುಖ್ಯ ವಿಷಯಗಳ ಜೊತೆಗೆ ಧಾರ್ಮಿಕ ಶಿಕ್ಷಣ (ಇಸ್ಲಾಮಿಕ್ ಅಧ್ಯಯನ, ಗುರ್ಮುಖಿ, ಪಾಲಿ) ಮುಂದುವರಿಯಲಿದೆ.
ಐತಿಹಾಸಿಕ ಹೆಜ್ಜೆ: ಸಿಎಂ ಧಾಮಿ ಹರ್ಷ
ಹೊಸ ಕಾಯ್ದೆ ಕುರಿತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹರ್ಷ ವ್ಯಕ್ತಪಡಿಸಿದ್ದು, ‘ರಾಜ್ಯದಲ್ಲಿ ಏಕರೂಪ ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಇದು ಐತಿಹಾಸಿಕ ಹೆಜ್ಜೆಯಾಗಿದೆ. ವರ್ಗ ಅಥವಾ ಸಮುದಾಯವನ್ನು ಲೆಕ್ಕಿಸದೆ, ರಾಜ್ಯದ ಪ್ರತಿಯೊಂದು ಮಗುವೂ ಸಮಾನ ಶಿಕ್ಷಣ ಮತ್ತು ಸಮಾನ ಅವಕಾಶಗಳೊಂದಿಗೆ ಪ್ರಗತಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಗುರಿಯಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಮುಸ್ಲಿಮರಿಂದ ಅಪಸ್ವರ:
ಹೊಸ ಕಾಯ್ದೆ ಕುರಿತು ಕೆಲ ಮುಸ್ಲಿಮರಿಂದ ವಿರೋಧ ವ್ಯಕ್ತವಾಗಿದೆ. ಜಮಿಯತ್ ಉಲಮಾ-ಎ-ಹಿಂದ್‌ನ ವಕ್ತಾರ ಮೊಹಮ್ಮದ್ ಶಾ ನಜರ್ ಮಾತನಾಡಿ, ‘ಈ ಕಾಯಿದೆಯು ಸಂವಿಧಾನದ 30ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯ ಮತ್ತು ಉತ್ತರಾಖಂಡದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ’ ಎಂದು ಆಕ್ಷೇಪಿಸಿದ್ದಾರೆ.