ದೀರ್ಘಕಾಲದ ಅನಾರೋಗ್ಯ : ಮಹಾರಾಷ್ಟ್ರದ ನಾಂದೇಡ್‌ ಕಾಂಗ್ರೆಸ್‌ ಸಂಸದ ವಸಂತ ಚವಾಣ್ ನಿಧನ

| Published : Aug 27 2024, 01:30 AM IST / Updated: Aug 27 2024, 05:05 AM IST

ಸಾರಾಂಶ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಷ್ಟ್ರದ ನಾಂದೇಡ್‌ ಕಾಂಗ್ರೆಸ್‌ ಲೋಕಸಭಾ ಸದಸ್ಯ ವಸಂತ್‌ ಚವಾಣ್‌ (69) ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

ನಾಂದೇಡ್‌: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಷ್ಟ್ರದ ನಾಂದೇಡ್‌ ಕಾಂಗ್ರೆಸ್‌ ಲೋಕಸಭಾ ಸದಸ್ಯ ವಸಂತ್‌ ಚವಾಣ್‌ (69) ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರಿಂದ ನಾಂದೇಡ್‌ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ವಸಂತ್‌ ಚವಾಣ್ ಸ್ಪರ್ಧೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ವಸಂತ್‌ ಅವರು ಹಾಲಿ ಬಿಜೆಪಿ ಸಂಸದ ಪ್ರತಾಪ್‌ ಪಾಟೀಲ್‌ ಚಿಖಾಲಿಕರ್‌ ಅವರನ್ನು 59,422 ಮತಗಳಿಂದ ಸೋಲಿಸಿದ್ದರು.

ಚವಾಣ್‌ 1990 ಮತ್ತು 2002 ರಲ್ಲಿ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 2002ರಲ್ಲಿ ಮಹಾರಾಷ್ಟ್ರದ ವಿಧಾನ ಪರಿಷತ್‌ಗೆ ಚುನಾಯಿತರಾಗಿದ್ದರು. 2009 ರಿಂದ 2014ರ ವರೆಗೆ ಶಾಸಕರಾಗಿದ್ದರು.

ಅವರ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ.

ಲಡಾಖ್‌ನಲ್ಲಿ 5 ಹೊಸ ಜಿಲ್ಲೆಗಳ ಸ್ಥಾಪನೆ: ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಣೆ ಮಾಡಿದ್ದಾರೆ.ಝನ್ಕಾರ್‌, ಡ್ರಾಸ್‌, ಶಾಮ್‌, ನುಬ್ರಾ ಮತ್ತು ಚಾಂಗ್ತಾಂಗ್‌ - ಇವು ಹೊಸ ಜಿಲ್ಲೆಗಳು. ಈವರೆಗೆ ಲೇಹ್‌ ಹಾಗೂ ಕಾರ್ಗಿಲ್‌ ಮಾತ್ರ ಜಿಲ್ಲೆಗಳಾಗಿದ್ದವು.ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅಮಿತ್‌ ಶಾ,‘ ಸಮೃದ್ಧ ಲಡಾಖ್‌ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದಿಂದ ಲಡಾಖ್‌ನ ಅಭಿವೃದ್ಧಿಗಾಗಿ ಕೇಂದ್ರ ಗೃಹ ಇಲಾಖೆಯು ಐದು ಹೊಸ ಜಿಲ್ಲೆಗಳನ್ನು ಸ್ಥಾಪಿಸಲಿದೆ’ಎಂದಿದ್ದಾರೆ.2019ರಲ್ಲಿ ಲಡಾಖ್‌ ಅನ್ನು ಕಾಶ್ಮೀರದಿಂದ ಪ್ರತ್ಯೇಕಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಇದು ಕೇಂದ್ರ ಗೃಹ ಇಲಾಖೆ ಆಡಳಿತಕ್ಕೆ ಒಳಪಡುತ್ತದೆ.

ಅಪರಾಧ ಚಟುವಟಿಕೆ ತಡೆಗೆ ವಿಫಲ: ಟೆಲಿಗ್ರಾಂ ಸಿಇಓ ಫ್ರಾನ್ಸ್‌ನಲ್ಲಿ ಸೆರೆ

ಪ್ಯಾರಿಸ್‌: ಖ್ಯಾತ ಸಂದೇಶ ರವಾನೆ ಆ್ಯಪ್‌ ಟೆಲಿಗ್ರಾಂನ ಸಿಇಓ ಪವೆಲ್‌ ಡುರೋವ್‌ ಅವರನ್ನು ಫ್ರಾನ್ಸ್‌ನ ಪೊಲೀಸರು ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಟೆಲಿಗ್ರಾಂನಲ್ಲಿ ಕ್ರಿಮಿನಲ್‌ ಚಟುವಟಿಗೆಗಳು ನಡೆಯುತ್ತಿದ್ದರೂ ಅದನ್ನು ತಡೆಯದ ಕಾರಣ ಪವೆಲ್‌ರನ್ನು ಬಂಧಿಸಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಬಂಧನಕ್ಕೆ ರಷ್ಯಾ ಖಂಡನೆ ವ್ಯಕ್ತಪಡಿಸಿದೆ. ರಷ್ಯಾ ಮೂಲದ ಪವೆಲ್‌ ಹಾಗೂ ಸೋದರ ನಿಕೊಲಯ್‌ ಟೆಲಿಗ್ರಾಂ ಸ್ಥಾಪಕರಾಗಿದ್ದು ಸದ್ಯ 90 ಕೋಟಿ ಸಕ್ರಿಯ ಬಳಕೆದಾರರ ಹೊಂದಿದೆ. ಆದರೆ ಆ್ಯಪ್‌ನಲ್ಲಿ ಕ್ರಿಮಿನಲ್‌ ಚಟುವಟಿಕೆ, ಸೈಬರ್‌ ಅಪರಾಧ, ಮಕ್ಕಳ ಅಶ್ಲೀಲ ಚಿತ್ರಗಳು ಹರಿದಾಡುತ್ತಿದ್ದ ಬಗ್ಗೆ ದೂರುಗಳು ಬಂದರೂ ಸಹ ಪವೆಲ್‌ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಫ್ರಾನ್ಸ್ ರಚಿಸಿರುವ ಸಂಸ್ಥೆಯ ದೂರಿನ ಅನ್ವಯ ಈ ಬಂಧನ ಮಾಡಲಾಗಿದೆ.

ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಹೊಸ ಪಕ್ಷ ಸ್ಥಾಪನೆ ಸಾಧ್ಯತೆ

ಹಜಾರಿಬಾಗ್‌ (ಜಾರ್ಖಂಡ್‌): ಈ ವರ್ಷದ ಕೊನೆಯಲ್ಲಿ ನಡೆವ ಜಾರ್ಖಂಡ್‌ ವಿಧಾನಸಭಾ ಚುನಾವಣೆಗೂ ಮುನ್ನ ಮಾಜಿ ಕೇಂದ್ರ ಸಚಿವ ಯಶವಂತ್‌ ಸಿನ್ಹಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಸಾಧ್ಯತೆಯಿದೆ.ಸೋಮವಾರ ನಡೆದ ಬೆಂಬಲಿಗರ ಸಭೆಯಲ್ಲಿ ಈ ಪ್ರಸ್ತಾವ ಮಾಡಿದ ಸಿನ್ಹಾ ಪಕ್ಷಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ತತ್ವಗಳಿಗೆ ಬದ್ಧವಾಗಿರುವಂತಹ ‘ಅಟಲ್ ವಿಚಾರ ಮಂಚ್’ ಎಂಬ ಹೆಸರಿಡುವ ಚರ್ಚೆ ನಡೆದಿದೆ. ಈ ಬಗ್ಗೆ ಶೀಘ್ರ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.ಈ ಸಭೆಯಲ್ಲಿ ಬಿಜೆಪಿಯ ಮಾಜಿ ಸಂಸದ ಜಯಂತ್‌ ಸಿನ್ಹಾ ಹಾಜರಿದ್ದರು.ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಸಿನ್ಹಾ 1998, 1999 ಮತ್ತು 2009 ರಲ್ಲಿ ಹಜಾರಿಬಾಗ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಬಿಜೆಪಿ ಬಿಟ್ಟಿದ್ದರು.

ಉತ್ತರ ಭಾರತದಲ್ಲಿ ಮಳೆ ಅಬ್ಬರ: ಹಲವೆಡೆ ರಸ್ತೆ ಬಂದ್‌, ಹೈಅಲರ್ಟ್‌

ಮೊರ್ಬಿ/ಜೈಪುರ/ಶಿಮ್ಲಾ: ಉತ್ತರಭಾರತದಲ್ಲಿ ಭಾನುವಾರ ತಡರಾತ್ರಿಯಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಭಾರೀ ಮಳೆ ನಡುವೆಯೂ ನದಿಯ ಪ್ರವಾಹದಲ್ಲಿ ರಸ್ತೆ ದಾಟುತ್ತಿದ್ದ 17 ಮಂದಿಯನ್ನು ಹೊತ್ತ ಟ್ರ್ಯಾಕ್ಟರ್‌ ಟ್ರಾಲಿ ನೀರಿನಲ್ಲಿ ಮುಳುಗಡೆಯಾಗಿದೆ. 17 ಮಂದಿಯೂ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಇದರಲ್ಲಿ 10 ಮಂದಿಯನ್ನು ರಕ್ಷಿಸಲಾಗಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ನವಸಾರಿ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 356 ಮಿ.ಮೀ. ಮಳೆಯಾಗಿದ್ದು, ಡ್ಯಾಂಗ್ಸ್‌ ಜಿಲ್ಲೆಯಲ್ಲಿ 268 ಮಿ.ಮೀ ದಾಖಲೆ ಮಳೆಯಾಗಿದೆ. ರಾಜ್ಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ಭಾರಿ ಮಳೆ ಕಾರಣ ಅಹಮದಾಬಾದ್‌ನಲ್ಲಿ ಮಂಗಳವಾರ ಶಾಲೆಗೆ ರಜೆ ಸಾರಲಾಗಿದೆ

ರಾಜಸ್ಥಾನ ತತ್ತರ:ರಾಜಸ್ಥಾನದಲ್ಲಿ ಕಳೆದ 24 ಗಂಟೆಯಲ್ಲಿ 200 ಮಿ.ಮೀ. ಗಿಂತಲೂ ಹೆಚ್ಚು ಮಳೆಯಾಗಿದ್ದು, ರಾಜ್‌ಸಮಂದ್, ಚಿತ್ತೋರ್‌ಗಢ, ಅಜ್ಮೀರ್, ಭಿಲ್ವಾರಾ ಮತ್ತು ಪಾಲಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ದಾಖಲೆಯ ಮಳೆಯಾಗಿದೆ. ಇದರ ನಡುವೆ ಬನ್‌ಸ್ವಾರ-ಉದಯಪುರ ಹೆದ್ದಾರಿ ಜಲಾವೃತಗೊಂಡಿದೆ. ಆದ್ದರಿಂದ ವಾಹನ ಸಂಚಾರವನ್ನು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲದಲ್ಲಿ 41 ರಸ್ತೆ ಬಂದ್: ಅದೇ ರೀತಿ ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಅಲ್ವ ಪ್ರಮಾಣದ ಮಳೆಯಾಗಿದೆ, ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ 41 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.