ಮಹಾರಾಷ್ಟ್ರ ವಿಧಾನಸಭೆ ಚುನಾವಣೆ : ಅಘಾಡಿಯಿಂದ ಸ್ತ್ರೀಯರಿಗೆ ₹3000, ಫ್ರೀ ಬಸ್‌ ಪ್ರಯಾಣ

| Published : Nov 11 2024, 01:12 AM IST / Updated: Nov 11 2024, 04:47 AM IST

ಸಾರಾಂಶ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಿಮಿತ್ತ ಇತ್ತೀಚೆಗೆ ಪ್ರತ್ಯೇಕ ಗ್ಯಾರಂಟಿಗಳು ಹಾಗೂ ಭರವಸೆಗಳನ್ನು ಘೋಷಿಸಿದ್ದ ಮಹಾ ವಿಕಾಸ್ ಅಘಾಡಿ (ಎಂವಿಎ) ಕೂಟದ ಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್), ಈಗ ಒಟ್ಟಾಗಿ ಅಘಾಡಿ ಕೂಟದ ಅಡಿ ಪ್ರಣಾಳಿಕೆ ಪ್ರಕಟಿಸಿವೆ.

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಿಮಿತ್ತ ಇತ್ತೀಚೆಗೆ ಪ್ರತ್ಯೇಕ ಗ್ಯಾರಂಟಿಗಳು ಹಾಗೂ ಭರವಸೆಗಳನ್ನು ಘೋಷಿಸಿದ್ದ ಮಹಾ ವಿಕಾಸ್ ಅಘಾಡಿ (ಎಂವಿಎ) ಕೂಟದ ಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್), ಈಗ ಒಟ್ಟಾಗಿ ಅಘಾಡಿ ಕೂಟದ ಅಡಿ ಪ್ರಣಾಳಿಕೆ ಪ್ರಕಟಿಸಿವೆ. 

ಇವುಗಳಲ್ಲಿ ಕರ್ನಾಟಕ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ 3000 ರು. ಹಾಗೂ ಉಚಿತ ಬಸ್‌ ಪ್ರಯಾಣ, ನಿರುದ್ಯೋಗಿಗಳಿಗೆ ಮಾಸಿಕ 4000 ರು.- ಪ್ರಮುಖವಾದವು.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಂವಿಎ ನಾಯಕರು ಭಾನುವಾರ ಪ್ರಣಾಳಿಕೆ ಬಿಡುಗಡೆ ಮಾಡಿದರು.ಅಧಿಕಾರಕ್ಕೆ ಬಂದರೆ ಮೊದಲ 100 ದಿನಗಳಲ್ಲಿ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ ₹3,000 ನೆರವು ನೀಡುವುದಾಗಿ ಭರವಸೆ ನೀಡಿದೆ.

 ಇದು ಈಗಿನ ಏಕನಾಥ ಶಿಂಧೆ ಸರ್ಕಾರದ ಲಡ್ಕಿ ಬಹಿನ್ ಯೋಜನೆಯ ₹1,500 ಕ್ಕಿಂತ ಹೆಚ್ಚು. ಅಲ್ಲದೆ, ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ 2,100 ರು.ಗಿಂತ ಅಧಿಕ.ಇನ್ನು ಕರ್ನಾಟಕ ರೀತಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 500 ರು. ದರದಲ್ಲಿ ವರ್ಷಕ್ಕೆ 6 ಸಿಲಿಂಡರ್‌, ಮಹಿಳೆಯರ ಸುರಕ್ಷತೆಗಾಗಿ ಬಲವಾದ ಕಾನೂನು, 9-16 ವರ್ಷ ವಯಸ್ಸಿನ ಹುಡುಗಿಯರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಮತ್ತು ಪ್ರತಿ ತಿಂಗಳು 2 ದಿನಗಳ ಋತುಸ್ರಾವ ರಜೆ ನೀಡುವುದಾಗಿ ಅಘಾಡಿ ಭರವಸೆ ನೀಡಿದೆ.

ರೈತರ ಉತ್ಪನ್ನಗಳಿಗೆ ಬೆಲೆ ಖಾತರಿ, ಸರಳ ಕೃಷಿ ವಿಮಾ ಯೋಜನೆ, ನಿರುದ್ಯೋಗಿ ಯುವಕರಿಗೆ ಮಾಸಿಕ ₹4,000 ಪಿಂಚಣಿ ನೀಡಲಾಗುವುದು. ಅಲ್ಲದೆ ಜಾತಿ ಗಣತಿ ನಡೆಸಲಾಗುವುದು ಎಂಬ ಭರವಸೆ ನೀಡಲಾಗಿದೆ.

ಭರವಸೆಗಳು

- ವರ್ಷಕ್ಕೆ 500 ರು. ದರದಲ್ಲಿ 6 ಸಿಲಿಂಡರ್‌

- ನಿರುದ್ಯೋಗಿಗಳಿಗೆ ಮಾಸಿಕ 4000 ರು.

- ಕರ್ನಾಟಕ ಮಾದರಿಯಲ್ಲೇ ಗ್ಯಾರಂಟಿ ಘೋಷಣೆ