‘ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ವಿಮಾನ ದುರಂತದ ತನಿಖೆಯನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಏಕೆಂದರೆ ಈ ದೇಶಲ್ಲಿ ಯಾರೂ ಸೇಫ್‌ ಅಲ್ಲ, ಅದರಲ್ಲೂ ವಿಶೇಷವಾಗಿ ರಾಜಕಾರಣಿಗಳು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಒತ್ತಾಯಿಸಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಈ ದೇಶದಲ್ಲಿ ರಾಜಕಾರಣಿಗಳು ಸೇಫ್‌ ಅಲ್ಲ ಎನ್ನಿಸ್ತಿದೆಪಕ್ಷಪಾತಿ ತನಿಖಾ ಸಂಸ್ಥೆಗಳ ತನಿಖೆ ಬೇಡ: ದೀದಿ

ಕೋಲ್ಕತಾ: ‘ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ವಿಮಾನ ದುರಂತದ ತನಿಖೆಯನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಏಕೆಂದರೆ ಈ ದೇಶಲ್ಲಿ ಯಾರೂ ಸೇಫ್‌ ಅಲ್ಲ, ಅದರಲ್ಲೂ ವಿಶೇಷವಾಗಿ ರಾಜಕಾರಣಿಗಳು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಒತ್ತಾಯಿಸಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಮಮತಾ, ‘ನಾವು ಸುಪ್ರೀಂ ಕೋರ್ಟನ್ನು ಮಾತ್ರ ನಂಬುತ್ತೇವೆ. ಇತರ ಎಲ್ಲಾ ಸಂಸ್ಥೆಗಳು ಸಂಪೂರ್ಣವಾಗಿ ರಾಜಿ ಮಾಡಿಕೊಂಡಿವೆ. ಅಜಿತ್‌ ಪವಾರ್ ವಿಮಾನ ಪತನದ ತನಿಖೆಯನ್ನು ಸುಪ್ರೀಂ ಮೇಲ್ವಿಚಾರಣೆಯಲ್ಲಿ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಎಲ್ಲ ನಾಯಕರೂ ತುರ್ತು ಕೆಲಸಗಳಿಗಾಗಿ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಅಹಮದಾಬಾದ್‌ನಲ್ಲಿ ಪತನವಾದ ವಿಮಾನ ದೊಡ್ಡದಾಗಿತ್ತು. ಆದರೆ ಇದು ಚಿಕ್ಕದು. ಇದು ಏಕೆ ಸಂಭವಿಸಿತು? ಈ ಬಗ್ಗೆ ತನಿಖೆಯಾಗಬೇಕು’ ಎಂದು ಖರ್ಗೆ ಒತ್ತಾಯಿಸಿದ್ದಾರೆ.

==

ರಾಜಕೀಯ ಬೇಡ: ದೀದಿಗೆ ಶರದ್, ಫಡ್ನವೀಸ್‌ ತಿರುಗೇಟು

ಬಾರಾಮತಿ: ‘ಮಮತಾ ಬ್ಯಾನರ್ಜಿ ತುಂಬಾ ಕೆಳಮಟ್ಟಕ್ಕಿಳಿದು ಆರೋಪ ಮಾಡುತ್ತಿದ್ದಾರೆ. ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಅಜಿತ್‌ ಪವಾರ್‌ ಸಾವಿನ ತನಿಖೆಗೆ ಆಗ್ರಹಿಸಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ತಿರುಗೇಟು ನೀಡಿದ್ದಾರೆ.ಇದೇ ವೇಳೆ, ‘ಇದು ಸಂಪೂರ್ಣವಾಗಿ ಆಕಸ್ಮಿಕ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ರಾಜ್ಯವು ಅಪಾರ ನಷ್ಟವನ್ನು ಅನುಭವಿಸಿದೆ ಮತ್ತು ಅದನ್ನು ತುಂಬಲು ಸಾಧ್ಯವಿಲ್ಲ’ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್ ಹೇಳಿದ್ದಾರೆ.

ಫಡ್ನವೀಸ್ ಮಾತನಾಡಿ, ‘ದೀದಿ ಹೇಳಿಕೆ ತುಂಬಾ ದುರದೃಷ್ಟಕರ. ಹಿರಿಯ ನಾಯಕ ಶರದ್ ಪವಾರ್ ಅವರೇ ರಾಜಕೀಯ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಾವಿನ ಮೇಲೂ ಇಂತಹ ಕೊಳಕು ಮತ್ತು ಹೇಯ ರಾಜಕೀಯ ನಡೆಯುತ್ತಿರುವ ಹಂತವನ್ನು ನಾವು ತಲುಪಿದ್ದೇವೆ ಎಂದು ನನಗೆ ತುಂಬಾ ದುಃಖವಾಗಿದೆ. ಮಮತಾ ದೀದಿ ರಾಜಕೀಯದಲ್ಲಿ ಇಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ನನಗೆ ತುಂಬಾ ದುಃಖ ತಂದಿದೆ; ಇದು ತುಂಬಾ ದುರದೃಷ್ಟಕರ ಮತ್ತು ಸಂಪೂರ್ಣವಾಗಿ ತಪ್ಪು. ಅವರು ಅಂತಹ ಹೇಳಿಕೆ ನೀಡಬಾರದಿತ್ತು. ಮಹಾರಾಷ್ಟ್ರದ ಅತ್ಯಂತ ಆಪ್ತ ಮತ್ತು ಪ್ರೀತಿಯ ನಾಯಕನ ಸಾವನ್ನು ಈ ರೀತಿ ರಾಜಕೀಯಗೊಳಿಸುವ ಮೂಲಕ ಅವಮಾನಿಸುವುದು ಸಂಪೂರ್ಣವಾಗಿ ತಪ್ಪು’ ಎಂದಿದ್ದಾರೆ.