55 ದಿನ ಉಪವಾಸ: ಚು. ಆಯೋಗಕ್ಕೆ ಮಮತಾ ಎಚ್ಚರಿಕೆ

| Published : Apr 16 2024, 01:06 AM IST / Updated: Apr 16 2024, 06:05 AM IST

ಸಾರಾಂಶ

ಚುನಾವಣಾ ಆಯೋಗ ರಾಜ್ಯದಲ್ಲಿ ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ. ಅನೇಕ ಅಧಿಕಾರಿಗಳನ್ನು ಬಿಜೆಪಿ ಅಣತಿಯ ಮೇಲೆ ವರ್ಗ ಮಾಡಲಾಗುತ್ತಿದೆ.

ಕೂಚ್‌ ಬೆಹಾರ್‌ (ಪ.ಬಂಗಾಳ): ಚುನಾವಣಾ ಆಯೋಗ ರಾಜ್ಯದಲ್ಲಿ ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ. ಅನೇಕ ಅಧಿಕಾರಿಗಳನ್ನು ಬಿಜೆಪಿ ಅಣತಿಯ ಮೇಲೆ ವರ್ಗ ಮಾಡಲಾಗುತ್ತಿದೆ. ಅನೇಕ ಕಡೆ ಗಲಭೆಗಳಾಗುತ್ತಿವೆ. ಇನ್ನು ಒಂದು ಅಹಿತಕರ ಘಟನೆ ನಡೆದರೂ ಚುನಾವಣಾ ಆಯೋಗದ ಕಚೇರಿ ಮುಂದೆ ಇನ್ನು 55 ದಿನ ಕಾಲ (ಚುನಾವಣಾ ಫಲಿತಾಂಶ ಪ್ರಕಟ ಆಗುವ ಜೂ.4ರವರೆಗೆ) ಉಪವಾಸ ಕೂರುವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ

ಸೋಮವಾರ ಅಲಿದೌರ್ಪಪುರದಲ್ಲಿ ಚುನಾವಣಾ ಭಾಷಣ ಮಾಡಿದ ಅವರು, ‘ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಯ ಆದೇಶದ ಮೇಲೆ ಕೆಲಸ ಮಾಡುತ್ತಿದೆ. ಇದರಿಂದಾಗಿ ನಿಷ್ಠೆಯಿಂದ ಕೆಲಸ ಮಾಡುವ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡಿ, ಕೇಸರಿಪಡೆಗೆ ನಿಷ್ಠರಾಗಿರುವವರನ್ನು ಚುನಾವಣಾ ಆಯೋಗ ಅಲ್ಲಿಗೆ ಕೂರಿಸುತ್ತಿದೆ’ ಎಂದು ಆರೋಪಿಸಿದರು.ಈ ಹಿಂದೆ ಭೂ ಒತ್ತುವರಿ ವಿರೋಧಿಸಿ 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದೆ. ಈಗ ಅಗತ್ಯಬಿದ್ದರೆ 55 ದಿನಗಳ ಉಪವಾಸ ನಡೆಸುತ್ತೇನೆ ಎಂದು ಗುಡುಗಿದರು.

ಇನ್ನು ಸೋಮವಾರ ಬೆಳಗ್ಗೆ ಕೂಚ್‌ ಬೆಹಾರ್‌ನಲ್ಲಿ ಮಾತನಾಡಿದ ಮಮತಾ, ‘ಬಿಜೆಪಿ ಆದೇಶದಂತೆ ಆದಾಯ ತೆರಿಗೆ ಅಧಿಕಾರಿಗಳು ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಅವರ ಹೆಲಿಕಾಪ್ಟರ್‌ರನ್ನು ತನಿಖೆಗೆ ಒಳಪಡಿಸಿತು. ಆದರೆ ಅದರಲ್ಲಿ ಏನೂ ಸಿಗಲಿಲ್ಲ. ಅಧಿಕಾರಿಗಳಿಗೆ ಬಿಜೆಪಿಯವರ ಹಲಿಕಾಪ್ಟರ್‌ಗಳನ್ನು ತನಿಖೆಗೆ ಒಳಪಡಿಸುವ ತಾಕತ್ತಿದೆಯೇ?’ ಎಂದು ಸವಾಲೆಸೆದರು.