ಕ್ರೀಡಾ ಆಡಳಿತ ಬಿಲ್‌ ಲೋಕಸಭೆಯಲ್ಲಿ ಮಂಡನೆ

| N/A | Published : Jul 24 2025, 01:45 AM IST / Updated: Jul 24 2025, 04:12 AM IST

ಸಾರಾಂಶ

ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಬುಧವಾರ ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಮಂಡಿಸಿದರು. ದೇಶದ ಕ್ರೀಡಾ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಈ ಬಿಲ್‌ ಮಂಡನೆಯಾಗಿದೆ. ಹಲವು ಮಹತ್ವದ ವಿಚಾರಗಳನ್ನು ಈ ಮಸೂದೆ ಒಳಗೊಂಡಿದೆ.

 ನವದೆಹಲಿ: ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಬುಧವಾರ ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಮಂಡಿಸಿದರು. ದೇಶದ ಕ್ರೀಡಾ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಈ ಬಿಲ್‌ ಮಂಡನೆಯಾಗಿದೆ. ಹಲವು ಮಹತ್ವದ ವಿಚಾರಗಳನ್ನು ಈ ಮಸೂದೆ ಒಳಗೊಂಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಹಲವು ದಶಕಗಳಿಂದ ಸ್ವತಂತ್ರ ಸಂಸ್ಥೆಯಾಗಿ ತನ್ನದೇ ರೀತಿ-ನೀತಿಗಳನ್ನು ಅನುಸರಿಸಿಕೊಂಡು ಬರುತ್ತಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಕೇಂದ್ರದ ಕ್ರೀಡಾ ಆಡಳಿತ ಮಸೂದೆ ವ್ಯಾಪ್ತಿಗೆ ಬರಲಿದೆ. ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ (ಎನ್‌ಎಸ್‌ಎಫ್‌)ಗಳಿಗೆ ಅನ್ವಯಿಸುವ ಎಲ್ಲಾ ನಿಯಮಗಳು ಬಿಸಿಸಿಐಗೆ ಕೂಡ ಅನ್ವಯವಾಗಲಿದೆ ಎಂದು ಮಾಂಡವೀಯ ಲೋಕಸಭೆಯಲ್ಲೇ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ, ಕೇಂದ್ರ ಸರ್ಕಾರವು ಬಿಸಿಸಿಐನ ಆಡಳಿತದ ಮೇಲೂ ಕಣ್ಣಿಡುವುದಾಗಿ ಸಂದೇಶ ರವಾನಿಸಿದೆ.

ಕ್ರೀಡಾ ಆಡಳಿತ ಮಸೂದೆಯಲ್ಲಿ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎನ್‌ಬಿ), ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣ (ಎನ್‌ಎಸ್‌ಟಿ), ರಾಷ್ಟ್ರೀಯ ಕ್ರೀಡಾ ಚುನಾವಣಾ ಪ್ಯಾನೆಲ್ ಸ್ಥಾಪನೆಗೆ ಅವಕಾಶ ರೂಪಿಸಲಾಗಿದೆ. ಇನ್ನು, ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಮಸೂದೆಯಲ್ಲೂ ತಿದ್ದುಪಡಿ ಮಾಡಲಾಗಿದೆ.

ಇದೆಲ್ಲದರ ಜೊತೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಬಿಸಿಸಿಐ ಕೂಡ ಒಳಪಡಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಏನಿದು ರಾಷ್ಟ್ರೀಯ ಕ್ರೀಡಾ ಮಂಡಳಿ?

ರಾಷ್ಟ್ರೀಯ ಕ್ರೀಡಾ ಆಡಳಿತ ಮಂಡಳಿ (ಎನ್‌ಎಸ್‌ಬಿ)ಯು ಬಿಸಿಸಿಐ ಸೇರಿ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌(ಎನ್‌ಎಸ್‌ಎಫ್‌)ಗಳ ಕಾರ್ಯವೈಖರಿ ಮೇಲೆ ಕಣ್ಣಿಡಲಿದ್ದು, ಕಾರ್ಯಚಟುವಟಿಕೆಗಳು ನಿಯಮಾನುಸಾರ ನಡೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಿದೆ.

ಕ್ರೀಡಾ ಫೆಡರೇಶನ್‌ಗಳು ಕೇಂದ್ರದಿಂದ ಅನುದಾನ ಪಡೆಯಬೇಕಿದ್ದರೆ ಎನ್‌ಎಸ್‌ಬಿ ರೂಪಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಅನುದಾನ ಬಿಡುಗಡೆ ಹಾಗೂ ನಿಯಮ ಉಲ್ಲಂಘನೆಯಾದ ಸಂದರ್ಭಗಳಲ್ಲಿ ಫೆಡರೇಶನ್‌ಗಳನ್ನು ಅಮಾನತುಗೊಳಿಸಿ, ತಾತ್ಕಾಲಿಕ ಆಡಳಿತ ಸಮಿತಿಯನ್ನು ನೇಮಿಸುವ ಅಧಿಕಾರವೂ ಎನ್‌ಎಸ್‌ಬಿಗೆ ಹೊಂದಿರಲಿದೆ. ಯಾವುದೇ ಹಣಕಾಸು ದುರುಪಯೋಗ ದೂರು ಬಂದರೂ ಅದರ ತನಿಖೆ ನಡೆಸುವ ಅಧಿಕಾರ ಸಹ ಎನ್‌ಎಸ್‌ಬಿ ಇರಲಿದೆ.

ಎನ್‌ಎಸ್‌ಎಫ್‌ಗಳಲ್ಲಿ ಆರ್‌ಟಿಐ ಕಾಯ್ದೆಯ ಶೇ.100ರಷ್ಟು ಅನುಷ್ಠಾನ, ನಿಗದಿತ ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸುವುದು, ಕ್ರೀಡಾಪಟುಗಳ ಹಿತ ಕಾಯುವ ಜವಾಬ್ದಾರಿಯೂ ಕ್ರೀಡಾ ಮಂಡಳಿಯದ್ದಾಗಿರಲಿದೆ. ಯಾರ್ಯಾರು ಇರಲಿದ್ದಾರೆ?: ರಾಷ್ಟ್ರೀಯ ಕ್ರೀಡಾ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರನ್ನು ಕೇಂದ್ರ ಸರ್ಕಾರ ನೇಮಿಸಲಿದೆ. ಸಾರ್ವಜನಿಕ ಆಡಳಿತ, ಕ್ರೀಡಾ ಆಡಳಿತ, ಕ್ರೀಡಾ ಕಾನೂನು ತಜ್ಞರು ಇರಲಿದ್ದಾರೆ. ಅಧ್ಯಕ್ಷ, ಸದಸ್ಯರನ್ನು ನೇಮಿಸಲು ಕ್ರೀಡಾ ಕಾರ್ಯದರ್ಶಿ, ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ನ ಪ್ರಧಾನ ನಿರ್ದೇಶಕ, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಇಬ್ಬರು ಮಾಜಿ ಪದಾಧಿಕಾರಿಗಳು ಹಾಗೂ ದ್ರೋಣಾಚಾರ್ಯ, ಖೇಲ್‌ ರತ್ನ ಅಥವಾ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟುವೊಬ್ಬರ ಸಮಿತಿ ಕೆಲಸ ಮಾಡಲಿದೆ.  

ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣ ಏಕೆ?

ಕ್ರೀಡಾಪಟು, ಕೋಚ್‌, ಅಧಿಕಾರಿಗಳಿಗೆ ಸಂಬಂಧಿಸಿದ 350ಕ್ಕೂ ಹೆಚ್ಚು ಪ್ರಕರಣಗಳು ಇನ್ನೂ ಬಾಕಿ ಇವೆ. ಇವುಗಳಿಗೆ ತ್ವರಿತ ಪರಿಹಾರ ಹಾಗೂ ಭವಿಷ್ಯದಲ್ಲಿ ಕ್ರೀಡಾಪಟುಗಳ ಆಯ್ಕೆ, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಚುನಾವಣೆ ವಿವಾದ, ಆಡಳಿತ ಹಾಗೂ ಹಣಕಾಸು ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಂಡು ಅವುಗಳನ್ನು ಇತ್ಯರ್ಥಗೊಳಿಸುವ ಹೊಣೆ ಕ್ರೀಡಾ ನ್ಯಾಯಾಧಿಕರಣದ ಮೇಲಿರಲಿದೆ. ಇದಕ್ಕೆ ಸಿವಿಲ್‌ ಕೋರ್ಟ್‌ನ ಮಾನ್ಯತೆ ಇರಲಿದ್ದು, ನ್ಯಾಯಾಧಿಕರಣದ ತೀರ್ಪನ್ನು ಕೇವಲ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ. 

ಕ್ರೀಡಾ ಚುನಾವಣಾ ಆಯೋಗ

ರಾಷ್ಟ್ರೀಯ ಕ್ರೀಡಾ ಚುನಾವಣಾ ಆಯೋಗವನ್ನು ರಚಿಸುವುದು ಸಹ ನೂತನ ಬಿಲ್‌ನಲ್ಲಿ ಒಳಗೊಂಡಿದೆ. ಈ ಆಯೋಗದಲ್ಲಿ ಭಾರತೀಯ ಚುನಾವಣಾ ಆಯೋಗ ಅಥವಾ ರಾಜ್ಯ ಚುನಾವಣಾ ಆಯೋಗಗಳ ಮಾಜಿ ಸದಸ್ಯರು ಇರಲಿದ್ದಾರೆ. ಅವರು ಎನ್‌ಎಸ್‌ಎಫ್‌ಗಳ ಚುನಾವಣೆಗಳಲ್ಲಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

Read more Articles on