ಸಂವಿಧಾನ ಸಾವಿರಾರು ವರ್ಷ ಹಳತು : ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ವಿವಾದ

| N/A | Published : Apr 09 2025, 12:32 AM IST / Updated: Apr 09 2025, 04:26 AM IST

Lok Sabha Leader of Opposition Rahul Gandhi (File Photo/ANI)

ಸಾರಾಂಶ

 ‘ಸಂವಿಧಾನವನ್ನು 1947ರಲ್ಲಿ ರಚಿಸಲಾಗಿದೆ ಎಂದು ಜನ ನನ್ನ ಬಳಿ ಹೇಳುತ್ತಾರೆ. ಆದರೆ, ಸಂವಿಧಾನ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಾನು ಅವರಿಗೆ ಹೇಳುತ್ತೇನೆ’ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ‘ಸಂವಿಧಾನವನ್ನು 1947ರಲ್ಲಿ ರಚಿಸಲಾಗಿದೆ ಎಂದು ಜನ ನನ್ನ ಬಳಿ ಹೇಳುತ್ತಾರೆ. ಆದರೆ, ಸಂವಿಧಾನ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಾನು ಅವರಿಗೆ ಹೇಳುತ್ತೇನೆ’ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಬಿಹಾರದಲ್ಲಿ ಸೋಮವಾರ ಸಭೆಯೊಂದರಲ್ಲಿ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಮತ್ತು ಸುಧಾಂಶು ತ್ರಿವೇದಿ, ‘ಇಂಥ ಹೇಳಿಕೆ ಮೂಲಕ ರಾಹುಲ್‌ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿದ್ದಾರೆ. ರಾಹುಲ್‌ ಹೇಳಿದಂತೆ ಸಾವಿರ ವರ್ಷ ಹಿಂದಾಗಲಿ 1947ರಲ್ಲಾಗಲಿ ಸಂವಿಧಾನ ರಚನೆಯಾಗಿಲ್ಲ. 1949ರ ನ.26ರಂದು ಅಂಗೀಕರಿಸಿ, 1950ರ ಜ.26ರಂದು ಜಾರಿಗೊಳಿಸಲಾಯಿತು’ ಎಂದಿದ್ದಾರೆ.

ಎಐಸಿಸಿ ಅಧಿವೇಶನದಲ್ಲಿ ಚಿದು ಮೂರ್ಛೆ , ಆಸ್ಪತ್ರೆಗೆ ದಾಖಲು

ಅಹಮದಾಬಾದ್‌: ಎಐಸಿಸಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ನಿರ್ಜಲೀಕರಣ ಹಾಗೂ ಬಿಸಿಲ ಧಗೆಯಿಂದ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಧಿವೇಶನದಲ್ಲಿ ಕುಸಿದ ಅವರನ್ನು ಎತ್ತಿಕೊಂಡು ಆ್ಯಂಬುಲೆನ್ಸ್‌ಗೆ ಹಾಕಿ ಆಸ್ಪತ್ರೆಗೆ ಸೇರಿಸಲಾಯಿತು. ಈ ಬಗ್ಗೆ ಟ್ವೀಟ್ ಮಾಡಿರುವ ಅವರ ಪುತ್ರ ಕಾರ್ತಿ ಚಿದಂಬರಂ, ‘ನನ್ನ ತಂದೆಯವರು ಅಹಮದಾಬಾದ್‌ನಲ್ಲಿ ತೀವ್ರ ಶಾಖ ಮತ್ತು ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರ ಆರೋಗ್ಯವನ್ನು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ ಅವರು ಸ್ಥಿರವಾಗಿದ್ದಾರೆ’ ಎಂದಿದ್ದಾರೆ.