ಸಾರಾಂಶ
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಿಂದ ಆಕಾಶವಾಣಿಯು ಆರಂಭವಾದ ದಿನದಿಂದ ಇದುವರೆಗೆ 34.13 ಕೋಟಿ ರು. ಆದಾಯ ಗಳಿಸಿದೆ’ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಶುಕ್ರವಾರ ಮಾಹಿತಿ ನೀಡಿದೆ.
ಈ ಬಗ್ಗೆ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿರುವ ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಖಾತೆ ಸಚಿವ ಎಲ್. ಮುರುಗನ್, ‘ಮನ್ ಕೀ ಬಾತ್ ಯೋಜನೆಯು ಸಾಂಪ್ರದಾಯಿಕ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಜನರನ್ನು ತಲುಪಿದೆ. ಹೆಚ್ಚುವರಿ ವೆಚ್ಚವಿಲ್ಲದೇ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಕಾಶವಾಣಿ ಪ್ರಸ್ತುತ ಪಡಿಸುವ ಈ ಕಾರ್ಯಕ್ರಮ ಆರಂಭವಾದ ದಿನದಿಂದ ಇದುವರೆಗೆ 34.13 ಕೋಟಿ ರು. ಆದಾಯಗಳಿಸಿದೆ’ ಎಂದಿದ್ದಾರೆ. ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯಾದ ಮನ್ ಕೀ ಬಾತ್ 2014, ಆಕ್ಟೋಬರ್ 3 ರಂದು ಆರಂಭಗೊಂಡಿತ್ತು. ಪ್ರತಿ ತಿಂಗಳ ಕೊನೆಯ ವಾರದಂದು ಪ್ರಧಾನಿ ಮೋದಿ ಕಾರ್ಯಕ್ರಮ ಉದ್ದೇಶಿಸಿ ಆಕಾಶವಾಣಿಯಲ್ಲಿ ಮಾತನಾಡುತ್ತಾರೆ.
ಜುಲೈನಲ್ಲಿ 19 ಕೋಟಿ ಆಧಾರ್ ಮುಖದೃಢೀಕರಣ: ದಾಖಲೆ
ನವದೆಹಲಿ ಈ ವರ್ಷದ ಜುಲೈನಲ್ಲಿ ಮುಖಗುರುತಿಸುವಿಕೆ ಮೂಲಕ 19.36 ಕೋಟಿ ಆಧಾರ್ ಕಾರ್ಡ್‌ಗಳ ದೃಢೀಕರಣ ಮಾಡಲಾಗಿದ್ದು, ಸಾರ್ವತ್ರಿಕ ದಾಖಲೆ ನಿರ್ಮಾಣವಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 5.77 ಕೋಟಿ ಆಧಾರ್ ಕಾರ್ಡ್‌ಗಳನ್ನು ಈ ರೀತಿ ದೃಢೀಕರಿಸಲಾಗಿತ್ತು. ಈ ವರ್ಷ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜು.1ರ ಒಂದೇ ದಿನ 1.22 ಕೋಟಿ ದೃಢೀಕರಣ ಯಶಸ್ವಿಯಾಗಿದ್ದು, ಒಂದೇ ದಿನ ನಡೆದ ಅತಿ ಹೆಚ್ಚು ಆಧಾರ್ ಮುಖದೃಢೀಕರಣ ಎಂಬ ದಾಖಲೆಯೂ ನಿರ್ಮಾಣವಾಗಿದೆ.ಆಧಾರ್ ಮುಖದೃಢೀಕರಣ ಎಂದರೆ, ವ್ಯಕ್ತಿಯ ಮುಖದ ಫೋಟೋವನ್ನು ತೆಗೆದುಕೊಂಡು, ಅದನ್ನು ಆಧಾರ್ ದತ್ತಾಂಶದಲ್ಲಿರುವ ಫೋಟೋದೊಂದಿಗೆ ಹೋಲಿಸಲಾಗುತ್ತದೆ. ಎರಡೂ ಫೋಟೋಗಳು ಹೊಂದಾಣಿಕೆಯಾದರೆ, ದೃಢೀಕರಣ ಯಶಸ್ವಿಯಾಗುತ್ತದೆ. ಬೆರಳಚ್ಚು ಅಥವಾ ಬಯೋಮೆಟ್ರಿಕ್ ವಿಧಾನಗಳನ್ನು ಬಳಸಲು ಸಾಧ್ಯವಾಗದ ವೃದ್ಧರು, ಅಂಗವಿಕಲರು ಮತ್ತು ಸಣ್ಣ ಮಕ್ಕಳಿಗೆ ಇದು ಹೆಚ್ಚು ಉಪಯುಕ್ತವಾಗಿದೆ.
ಉಜ್ವಲಾ ಯೋಜನೆಗೆ ₹12,000 ಕೋಟಿ ಸಬ್ಸಿಡಿಗೆ ಸಂಪುಟ ಅನುಮೋದನೆ
ನವದೆಹಲಿ: 2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ 10.33 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗುವಂತೆ, 12,000 ಕೋಟಿ ರು. ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ಮೂಲಕ ಪ್ರತಿ 14.2 ಕೆಜಿ ತೂಕದ ಸಿಲಿಂಡರ್‌ಗೆ 300 ರು. ಸಬ್ಸಿಡಿ ನೀಡಲಾಗುತ್ತದೆ.ಅದೇ ರೀತಿ, ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂಗಳಿಗೆ ಕಡಿಮೆ ಬೆಲೆಗೆ ಎಲ್‌ಪಿಜಿ ಸಿಲಿಂಡರ್ ಮಾರಾಟ ಮಾಡಿದ್ದರಿಂದ ಉಂಟಾದ ನಷ್ಟವನ್ನು ಸರಿದೂಗಿಸುವುದಕ್ಕಾಗಿ 30,000 ಕೋಟಿ ರು. ಸಬ್ಸಿಡಿ ನೀಡಲು ಅನುಮೋದನೆ ದೊರಕಿದೆ.2024-25ನೇ ಸಾಲಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ದರ ವಿಪರೀತ ಏರಿಕೆಯಾಗಿದ್ದರಿಂದ ಈ ಕಂಪನಿಗಳು ಗ್ರಾಹಕರಿಗೆ ಕನಿಷ್ಠ ದರದಲ್ಲಿ ಎಲ್‌ಪಿಜಿ ಮಾರಾಟ ಮಾಡಿದ್ದವು.
ಒಬಿಸಿ ಕೆನೆಪದರ ಆದಾಯ ಮಿತಿ ಪರಿಷ್ಕರಣೆಗೆ ಶಿಫಾರಸು
ನವದೆಹಲಿ: ಸರ್ಕಾರಿ ಕಲ್ಯಾಣ ಯೋಜನೆಗಳು, ಮೀಸಲಾತಿಯ ಲಾಭ ಪಡೆಯುುವುದರಿಂದ ದೊಡ್ಡ ಪ್ರಮಾಣದಲ್ಲಿ ಒಬಿಸಿ ಸಮುದಾಯದ ಹಲವು ಕುಟುಂಬಗಳು ಹೊರಗುಳಿಯುತ್ತಿವೆ. ಹೀಗಾಗಿ ಇತರೆ ಹಿಂದುಳಿದ ಸಮುದಾಯಗಳ ಕೆನೆಪದರ ಆದಾಯ ಮಿತಿ ಪರಿಷ್ಕರಿಸುವ ತುರ್ತು ಅಗತ್ಯವಿದೆ ಎಂದು ಸಂಸದೀಯ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಕುರಿತ ವರದಿಯನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾಗಿದ್ದು, 2017ರಲ್ಲಿ ಕೊನೆಯ ಬಾರಿಗೆ ಒಬಿಸಿ ಕೆನೆಪದರದ ಆದಾಯ ಮಿತಿಯನ್ನು ವಾರ್ಷಿಕ 6.5 ಲಕ್ಷದಿಂದ 8ಲಕ್ಷ ರು.ಗೆ ಏರಿಸಲಾಗಿತ್ತು. ಆದರೆ ಈ ಆದಾಯ ಮಿತಿ ತೀವ್ರ ಕಡಿಮೆ ಇದೆ. ಇದರಿಂದ ಒಬಿಸಿ ಸಮುದಾಯಗಳಿಗೆ ಹೆಚ್ಚಿನ ಲಾಭವಾಗುತ್ತಿಲ್ಲ ಎಂದು ಬಿಜೆಪಿ ಸಂಸದ ಗಣೇಶ್ ಸಿಂಗ್ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ.ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ನಿಯಮಾವಳಿ ಪ್ರಕಾರ ಈ ಮಿತಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು ಎಂದು ಹೇಳುತ್ತದೆ.ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಕಡಿಮೆ ಆದಾಯದ ಗುಂಪುಗಳಲ್ಲೂ ವೇತನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಒಬಿಸಿ ಕೆನೆಪದರದ ಆದಾಯ ಮಿತಿ ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಆದಾಯ ತೆರಿಗೆ ಮಸೂದೆ ಹಿಂಪಡೆದ ಕೇಂದ್ರ: ಆ.11ಕ್ಕೆ ಪರಿಷ್ಕೃತ ಮಸೂದೆ ಮಂಡನೆ
ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ-2025ನ್ನು ಹಿಂಪಡೆದುಕೊಂಡಿದ್ದಾರೆ. ಸಂಸತ್ತಿನ ಆಯ್ಕೆ ಸಮಿತಿಯ ಸಲಹೆಗಳನ್ನು ಅಳವಡಿಸಿ, ಮಸೂದೆಯ ಪರಿಷ್ಕೃತ ಆವೃತ್ತಿಯನ್ನು ಆ.11ರಂದು ಸರ್ಕಾರ ಲೋಕಸಭೆಯಲ್ಲಿ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.ಪ್ರಸ್ತುತ ಇರುವ ಮಸೂದೆ 6 ದಶಕಗಳಷ್ಟು ಹಳೆಯದು. ಇದರ ಹಲವಾರು ಆವೃತ್ತಿಗಳಿಂದ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಿ, ಸ್ಪಷ್ಟ ಮತ್ತು ವಿನೂತನ ಆವೃತ್ತಿಯನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಹೊಸ ಆವೃತ್ತಿಗೆ ಬೈಜಯಂತ್ ಪಾಂಡಾ ನೇತೃತ್ವದ 31 ಸದಸ್ಯರ ಆಯ್ಕೆ ಸಮಿತಿ ಹಲವಾರು ಬದಲಾವಣೆಗಳನ್ನು ಸೂಚಿಸಿದೆ.
ಯಾವೆಲ್ಲ ಬದಲಾವಣೆ?:
ಹೊಸ ಮಸೂದೆಯಲ್ಲಿ ಧಾರ್ಮಿಕ ಮತ್ತು ದತ್ತಿ ಟ್ರಸ್ಟ್‌ಗಳಿಗೆ ದೇಣಿಗೆಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಮುಂದುವರಿಸಲು ಒಲವು ತೋರಲಾಗಿದೆ. ಜೊತೆಗೆ ತೆರಿಗೆದಾರರು ಯಾವುದೇ ದಂಡವನ್ನು ಪಾವತಿಸದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಂತಿಮ ದಿನಾಂಕದ ನಂತರವೂ ಟಿಡಿಎಸ್ ಮರುಪಾವತಿಯನ್ನು ಕ್ಲೈಮ್ ಮಾಡಲು ಅನುಮತಿಸಲು ಸೂಚಿಸಲಾಗಿದೆ. ಹೊಸ ಮಸೂದೆಯಲ್ಲಿ ಸರ್ಕಾರವು, ಲಾಭರಹಿತ ಸಂಸ್ಥೆಗಳು (ಎನ್‌ಪಿಒ) ಶುದ್ಧ ಧಾರ್ಮಿಕ ಟ್ರಸ್ಟ್‌ಗಳಿಂದ ಸ್ವೀಕರಿಸುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ನೀಡಿದೆ. ಆದರೆ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಂತಹ ಇತರ ಕಾರ್ಯಗಳನ್ನು ಹೊಂದಿರುವ ಧಾರ್ಮಿಕ ಟ್ರಸ್ಟ್‌ನಿಂದ ಪಡೆದ ದೇಣಿಗೆಗಳಿಗೆ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.