ಸಾರಾಂಶ
ಅಮೆರಿಕದ ಜತೆ ಭಾರತ ವ್ಯಾಪಾರ ಸಂಘರ್ಷಕ್ಕೆ ಇಳಿದಿರುವ ನಡುವೆಯೇ ಚೀನಾದ ಟಿಯಾಂಜಿನ್‌ನಲ್ಲಿ ಮಾಸಾಂತ್ಯದಲ್ಲಿ ನಡೆಯಲಿರುವ ಶಾಂಘೈ ಶೃಂಗಸಭೆಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರಂಪ್ ವೈರಿ ದೇಶ ಚೀನಾ ಅಧಿಕೃತವಾಗಿ ಆಹ್ವಾನಿಸಿದೆ.
ಬೀಜಿಂಗ್: ಅಮೆರಿಕದ ಜತೆ ಭಾರತ ವ್ಯಾಪಾರ ಸಂಘರ್ಷಕ್ಕೆ ಇಳಿದಿರುವ ನಡುವೆಯೇ ಚೀನಾದ ಟಿಯಾಂಜಿನ್‌ನಲ್ಲಿ ಮಾಸಾಂತ್ಯದಲ್ಲಿ ನಡೆಯಲಿರುವ ಶಾಂಘೈ ಶೃಂಗಸಭೆಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರಂಪ್ ವೈರಿ ದೇಶ ಚೀನಾ ಅಧಿಕೃತವಾಗಿ ಆಹ್ವಾನಿಸಿದೆ. ಅಲ್ಲದೆ, ಮೋದಿ ಶಾಂಘೈಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ ಎಂಬ ವರದಿಗಳನ್ನು ಸ್ವಾಗತಿಸಿದೆ.
ಈ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ಆ.31ರಿಂದ ಸೆ.1ರ ವರೆಗೆ ಟಿಯಾಂಜಿನ್‌ನಲ್ಲಿ ಎಸ್‌ಸಿಒ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾ ಆಹ್ವಾನಿಸುತ್ತಿದೆ. ಎಲ್ಲಾ ರಾಷ್ಟ್ರಗಳ ಸಂಘಟಿತ ಪ್ರಯತ್ನದಿಂದ, ಇದು ಒಗ್ಗಟ್ಟು, ಸ್ನೇಹ ಮತ್ತು ಫಲಪ್ರದ ಫಲಿತಾಂಶಗಳ ಸಭೆಯಾಗಲಿದೆ.
ಅಂತೆಯೇ, ಎಸ್‌ಸಿಒ ಸಮನ್ವಯ, ಚೈತನ್ಯ ಮತ್ತು ಉತ್ಪಾದಕತೆಯನ್ನು ಒಳಗೊಂಡ ಉತ್ತಮ ಗುಣಮಟ್ಟದ ಅಭಿವೃದ್ಧಿಯ ಹೊಸ ಹಂತವನ್ನು ಪ್ರವೇಶಿಸುತ್ತದೆ ಎಂದು ನಾವು ನಂಬಿದ್ದೇವೆ’ ಎಂದು ಹೇಳಿದೆ. ವ್ಯಾಪಾರ ಮತ್ತು ತೆರಿಗೆ ಕಾರಣ ಅಮೆರಿಕದೊಂದಿಗೆ ಭಾರತ ಮತ್ತು ಚೀನಾದ ಸಂಬಂಧ ಡೋಲಾಯಮಾನವಾಗಿರುವ ಹೊತ್ತಿನಲ್ಲಿ, ಆನೆ ಮತ್ತು ಡ್ರ್ಯಾಗನ್ ಸಂಬಂಧ ಮತ್ತೆ ಸುಧಾರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಈ ಬೆಳವಣಿಗೆಯಾಗಿದೆ.