ದೆಹಲಿ ಸಿಎಂ ಕಚೇರಿ ಅನಧಿಕೃತ ವ್ಯಕ್ತಿಗಳಿಂದ ಹೈಜಾಕ್‌ ಮಾಡಲಾಗಿದೆ ಎಂದು ಮನೋಜ್‌ ತಿವಾರಿ ತಿಳಿಸಿದ್ದಾರೆ.

ನವದೆಹಲಿ: ಜೈಲಿನಿಂದಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೊರಡಿಸಿದ ಕಾರ್ಯಾದೇಶದ ಪತ್ರ ನಕಲಿ ಎಂದು ಬಿಜೆಪಿ ಆರೋಪಿಸಿದೆ.

ಭಾನುವಾರ ಮಾತನಾಡಿದ ಬಿಜೆಪಿ ನಾಯಕರಾದ ಮಣಿಂದರ್‌ ಸಿಂಗ್‌ ಸಿರ್ಸಾ, ಸಂಸದ ಮನೋಜ್‌ ತಿವಾರಿ, ‘ಒಂದು ವೇಳೆ ಕೇಜ್ರಿವಾಲ್‌ ಆದೇಶ ಹೊರಡಿಸಬೇಕಾದರೆ ಅದನ್ನು ಮುಖ್ಯ ಕಾರ್ಯದರ್ಶಿಗಳ ಮೂಲಕ ಹೊರಡಿಸಬೇಕು. ಅದಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ಬೇಕು. 

ಇಲ್ಲಿ ಎರಡೂ ಆಗಿಲ್ಲ. ಜೊತೆಗೆ ಕಾರ್ಯಾದೇಶದ ಪತ್ರದಲ್ಲಿ ಪತ್ರದ ಸಂಖ್ಯೆ ಅಥವಾ ಆರ್ಡರ್‌ ನಂಬರ್‌ ಇಲ್ಲ. ಯಾರ ಹೆಸರಲ್ಲಿ ಹೊರಡಿಸಲಾಗಿದೆ, ಯಾರಿಗೆ ಆದೇಶ ನೀಡಲಾಗಿದೆ ಎಂಬ ಮಾಹಿತಿಯೂ ಇಲ್ಲ’ ಎಂದು ದೂರಿದ್ದಾರೆ.

ಅಲ್ಲದೆ, ‘ಇಡೀ ಪ್ರಕರಣ ಒಂದು ಯೋಜಿತ ಸಂಚು. ದೆಹಲಿ ಸಿಎಂ ಕಚೇರಿಯನ್ನು ಕೆಲವರು ಹೈಜಾಕ್‌ ಮಾಡಿದ್ದಾರೆ. ಅನಧಿಕೃತ ವ್ಯಕ್ತಿಗಳು ಇಂಥ ಈ ಆದೇಶ ಹೊರಡಿಸಿದ್ದಾರೆ’ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.