ಸಾರಾಂಶ
ವೈದ್ಯಕೀಯ ಕ್ಷೇತ್ರದಲ್ಲಿ ಚೀನಾ ಕ್ರಾಂತಿಕಾರಿ ಆವಿಷ್ಕಾರ ಮಾಡಿದೆ. ವೈದ್ಯರು ರೋಗಿಯ ಬಳಿ ಇರದಿದ್ದರೂ, ಉಪಗ್ರಹ ಆಧಾರಿತ ಶಸ್ತ್ರಚಿಕಿತ್ಸೆಯನ್ನು ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿದ ಖ್ಯಾತಿ ಚೀನಾಗೆ ಒಲಿದಿದೆ.
ಬೀಜಿಂಗ್: ವೈದ್ಯಕೀಯ ಕ್ಷೇತ್ರದಲ್ಲಿ ಚೀನಾ ಕ್ರಾಂತಿಕಾರಿ ಆವಿಷ್ಕಾರ ಮಾಡಿದೆ. ವೈದ್ಯರು ರೋಗಿಯ ಬಳಿ ಇರದಿದ್ದರೂ, ಉಪಗ್ರಹ ಆಧಾರಿತ ಶಸ್ತ್ರಚಿಕಿತ್ಸೆಯನ್ನು ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿದ ಖ್ಯಾತಿ ಚೀನಾಗೆ ಒಲಿದಿದೆ.
ಭೂಮಿಯಿಂದ 36 ಸಾವಿರ ಕಿ.ಮೀ. ದೂರದಲ್ಲಿರುವ ಅಪ್‌ಸ್ಟಾರ್-6ಡಿ ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹದ ಸಹಾಯದಿಂದ ಚೀನಾದ ಸೇನಾ ವೈದ್ಯರು, ಸಾವಿರಾರು ಕಿ.ಮೀ ದೂರದ ಬೀಜಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ರೋಬೋಟ್‌ಗಳ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.ಶಸ್ತ್ರಚಿಕಿತ್ಸೆ ಹೇಗೆ?:
ಸಾಮಾನ್ಯವಾಗಿ ವೈದ್ಯರು ರೋಗಿಗಳ ಬಳಿಯೇ ಇದ್ದು, ರೋಬೋಟ್‌ಗೆ ಅಗತ್ಯವಾದ ಸೂಚನೆಗಳನ್ನು ನೀಡುತ್ತಾ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ಆದರೆ ಇದೀಗ ಟಿಬೆಟ್, ಯುನ್ನಾನ್ ಹಾಗೂ ಸನ್ಯಾಗಳಲ್ಲಿ ಕುಳಿತ ವೈದ್ಯರ ತಂಡ, ಬೀಜಿಂಗ್‌ನಲ್ಲಿದ್ದ ರೋಗಿಗಳ ಮೇಲೆ 5 ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ವೇಳೆ ಯಕೃತ್ತು, ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.ಉಪಗ್ರಹ ಚಿಕಿತ್ಸೆ:
ವೈದ್ಯರು ತಾವಿದ್ದಲ್ಲಿಂದಲೇ ನೀಡುತ್ತಿದ್ದ ಆದೇಶಗಳು ಭೂಮಿಯಿಂದ 36 ಸಾವಿರ ಕಿ.ಮೀ. ದೂರದಲ್ಲಿರುವ ಉಪಗ್ರಹಕ್ಕೆ ತಲುಪಿ, ಅಲ್ಲಿಂದ ರೊಬೋಟ್‌ಗಳಿಗೆ ರವಾನೆಯಾಗುತ್ತಿತ್ತು. ಅದರ ಅನುಸಾರ ರೊಬೋಟ್‌ಗಳು ಚಿಕಿತ್ಸೆ ನಡೆಸಿವೆ. ಹೀಗೆ ವೈದ್ಯರು ನೀಡಿದ ಸಂದೇಶ ಉಪಗ್ರಹಕ್ಕೆ ಹೋಗಿ, ಅಲ್ಲಿಂದ ಆಸ್ಪತ್ರೆಯಲ್ಲಿನ ರೋಬೋಗಳಿಗೆ ತಲುಪಲು ಅವು 1.5 ಲಕ್ಷ ಕಿ.ಮೀ ದೂರ ಚಲಿಸಬೇಕಿತ್ತು. ಅದು ಯಶಸ್ವಿಯಾಗಿದ್ದು ಈ ತಂತ್ರಜ್ಞಾನದ ಸಾಮರ್ಥ್ಯ, ಸುರಕ್ಷತೆ ಹಾಗೂ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿವೆ. ಜತೆಗೆ, ಡೇಟಾ ವಿಭಜನೆ, ಸೇವಾ ನಿಯಂತ್ರಣದ ಗುಣಮಟ್ಟ, ಟ್ರಾಫಿಕ್ ನಿರ್ವಹಣೆಗೂ ಸಾಕ್ಷಿಯಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಟ್ಟ ಎಲ್ಲಾ ರೋಗಿಗಳು ಚೆತರಿಸಿಕೊಂಡಿದ್ದು, ಮರುದಿನವೇ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿಯಾಗಿದೆ. ಉಪಯೋಗವೇನು?:ಯುದ್ಧಗ್ರಸ್ಥ ಪ್ರದೇಶಗಳು ಸೇರಿದಂತೆ ವೈದ್ಯರು ತಕ್ಷಣ ತಲುಪಲಾಗದ ಸ್ಥಳಗಳಲ್ಲಿರುವ ರೋಗಿಗಳ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ದೂರದಿಂದಲೇ ನಡೆಸಲು ಇದು ಸಹಕಾರಿಯಾಗಲಿದೆ. ಜತೆಗೆ, ಈ ತಂತ್ರಜ್ಞಾನವು ಗಡಿಗಳು ಹಾಗೂ ಸಾಗಣೆಯ ಸವಾಲುಗಳನ್ನೂ ನಿವಾರಿಸಬಲ್ಲದು. ತುರ್ತು ಸಮಯಗಳಲ್ಲಿ ಎಲ್ಲಿಂದಲಾದರೂ ಚಿಕಿತ್ಸೆ ನೀಡಬಹುದು.