ಸಾರಾಂಶ
ಬೋರ್ಡ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಸಂಭಾಷಣೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತನಾಡಿದ್ದಾರೆ.
ನವದೆಹಲಿ: ಬೋರ್ಡ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಸಂಭಾಷಣೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತನಾಡಿದ್ದಾರೆ. ಬುಧವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ದೀಪಿಕಾ, ‘2015ರಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದಾಗ ಅದರ ಕುರಿತು ಮಾತನಾಡುವುದಕ್ಕೆ ಅವಕಾಶವಿರಲಿಲ್ಲ. ಆದರೆ ಮನಬಿಚ್ಚಿ ಮಾತನಾಡತೊಡಗಿದಾಗ ನಾನು ಹಗುರಳಾಗುತ್ತಿದ್ದೆ. ಅಲ್ಲಿಂದ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲುಸ ಶುರು ಮಾಡಿದೆ’ ಎಂದು ಹೇಳಿದರು.
ಖಿನ್ನತೆಯನ್ನು ಎದುರಿಸುವ ಬಗೆಯನ್ನು ತಮ್ಮ ಅನುಭವದೊಂದಿಗೆ ವಿವರಿಸಿದ ನಟಿ, ‘ಪ್ರಧಾನಿ ಮೋದಿಯವರ ‘ಎಕ್ಸಾಂ ವಾರಿಯರ್ಸ್’ ಪುಸ್ತಕದಲ್ಲಿ ಹೇಳಿರುವಂತೆ ಭಾವನೆಗಳನ್ನು ನಿಗ್ರಹಿಸುವ ಬದಲು ವ್ಯಕ್ತಪಡಿಸಬೇಕು. 2014ರಲ್ಲಿ ನಿರಂತರವಾಗಿ ಕೆಲಸದಲ್ಲಿ ತೊಡಗಿದ್ದ ನಾನು ಇದ್ದಕ್ಕಿದ್ದಂತೆ ಒಂದು ದಿನ ಪ್ರಜ್ಞಾಹೀನಳಾದೆ. ಆಗ ನನ್ನ ತಾಯಿಗೆ ಏನೋ ಸಮಸ್ಯೆ ಇರುವುದು ತಿಳಿಯಿತು. ಆ ಬಗ್ಗೆ ವಿಚಾರಿಸಿದಾಗ ನನಗೆ ಏನಾಗುತ್ತಿತ್ತೆಂದು ತಿಳಿಯದೆ, ಜೀವನ ಸಾಕೆನಿಸುತ್ತಿದೆ ಎಂದೆ. ಆಗ ಅವರು ನನ್ನನ್ನು ಮನಶ್ಶಾಸ್ತ್ರಜ್ಞರ ಬಳಿ ಕರೆದೊಯ್ದರು’ ಎಂದರು.ಸ್ವಾಸ್ಥ್ಯ ಕಾಪಾಡಲು ಸಲಹೆ:
‘ಅಧಿಕ ಬಿಸಿಲು, ಸ್ವಚ್ಛ ಗಾಳಿಗೆ ಒಡ್ಡಿಕೊಳ್ಳಿ. ಆಗಾಗ ಸಣ್ಣ ವಿರಾಮ ಪಡೆದು ಮನಸ್ಸಿಗೆ ವಿಶ್ರಾಂತಿ ನೀಡಿ, ಸಂಯಮದಿಂದಿರಿ. ಹೆಚ್ಚು ನೀರು ಕುಡಿದು, ಒಳ್ಳೆ ನಿದ್ದೆ, ವ್ಯಾಯಾಮ, ಧ್ಯಾನ ಮಾಡಿ’ ಎಂದು ದೀಪಿಕಾ ಸಲಹೆ ನೀಡಿದರು. ಜೊತೆಗೆ, ಪ್ರತಿಸ್ಪರ್ಧಿಗಳಿಂದ ಕಲಿತು, ಹೊಸದಾಗ ತಾವೇನು ಮಾಡಬಹುದೆಂದು ಕಂಡುಕೊಳ್ಳಿ ಎಂಬ ಕಿವಿಮಾತು ಹೇಳಿದರು.