ಸಾರಾಂಶ
ನವದೆಹಲಿ: ಒಟಿಟಿ ವೇದಿಕೆಗಳು, ಸಾಮಾಜಿಕ ಜಾಲತಾಣ ಪ್ರಭಾವಿಗಳು, ಸ್ವತಂತ್ರ ಪತ್ರಕರ್ತರು, ಯುಟ್ಯೂಬ್ ಮೂಲಕ ಸುದ್ದಿ ಪ್ರಸಾರ ಮಾಡುವವರನ್ನು ನಿಯಂತ್ರಣಾ ವ್ಯಾಪ್ತಿಗೆ ತರುವ ಉದ್ದೇಶದಿಂದ ರೂಪಿಸಿದ್ದ ಪ್ರಸಾರ ಸೇವಾ (ತಿದ್ದುಪಡಿ) 2024 ಕರಡು ಮಸೂದೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ.
ಕರಡು ಮಸೂದೆ ಕುರಿತು ಅಭಿಪ್ರಾಯ ಕೋರಿ ಆಯ್ದ ವ್ಯಕ್ತಿಗಳಿಗೆ ಸರ್ಕಾರ ಕರಡು ವರದಿಯ ಪ್ರತಿ ರವಾನಿಸಿತ್ತು. ಆದರೆ ಈ ರೀತಿಯಲ್ಲಿ ಅಭಿಪ್ರಾಯ ಸಂಗ್ರಹ ಮತ್ತು ಕರಡು ಮಸೂದೆಯಲ್ಲಿ ಕೆಲ ಅಂಶಗಳ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಅಂಶಗಳು ವಾಕ್ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವಂತಿದೆ. ಇದನ್ನು ಹಿಂಪಡೆಯಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಆದರೆ ಬೆನ್ನಲ್ಲೇ ಕರಡು ಮಸೂದೆಗೆ ಒಂದಿಷ್ಟು ತಿದ್ದುಪಡಿ ಮಾಡಿ, ಪರಿಷ್ಕೃತ ವರದಿ ಬಿಡುಗಡೆ ಮಾಡುವ ಸಲುವಾಗಿ ಇದೀಗ ಹಿಂದಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಇದೀಗ ಹಿಂಪಡೆಯಲಾದ ಕರಡು ಮಸೂದೆಯಲ್ಲಿ, ಪ್ರಚಲಿತ ಸುದ್ದಿ ಪ್ರಸಾರ ಮಾಡುವ ಜಾಲತಾಣ ಪ್ರಭಾವಿಗಳು, ಒಟಿಟಿ ಪ್ರಸಾರಕರು, ಯುಟ್ಯೂಬ್ ಮೂಲಕ ಮಾಹಿತಿ ಹಂಚಿಕೊಳ್ಳುವವರನ್ನೂ ಸುದ್ದಿ ಪ್ರಸಾರಕರು ಎಂದು ಪರಿಗಣಿಸುವ ಅಂಶಗಳಿದ್ದವು. ಜೊತೆಗೆ ಇವರ ಪ್ರಸಾರ ಮಟ್ಟ ಸರ್ಕಾರ ನಿಗದಿಪಡಿಸಿದ ಮಟ್ಟ ಮೀರಿದರೆ ಅವರ ಸುದ್ದಿ ಪ್ರಸಾರಕ್ಕೂ ಮುನ್ನ ಪರಿಶೀಲಿಸಲು ಸಮಿತಿ ರಚಿಸುವುದು ಕಡ್ಡಾಯವಾಗಿತ್ತು.