ಸಾರಾಂಶ
6 ದಶಕಗಳ ಕಾಲ ಭಾರತೀಯ ವಾಯುಸೇನೆಯ ಬೆನ್ನೆಲುಬಾಗಿ ಕೆಲಸ ಮಾಡಿದ್ದ ರಷ್ಯಾನಿರ್ಮಿತ ಮಿಗ್-21 ಯುದ್ಧವಿಮಾನಕ್ಕೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.
-ಚಂಡೀಗಢದ ವಾಯುನೆಲೆಯಲ್ಲಿ ಅಂತಿಮ ಹಾರಾಟ-ಮಿಗ್-21 ಭಾರತೀಯ ವಾಯುಪಡೆಯ ಹೆಮ್ಮೆ: ಸಿಂಗ್
-ನಿವೃತ್ತಿ ಕಾರಣ ವಸ್ತುಸಂಗ್ರಹಾಲಯದಲ್ಲಿಡುವ ಸಾಧ್ಯತೆಪಿಟಿಐ ಚಂಡೀಗಢ
6 ದಶಕಗಳ ಕಾಲ ಭಾರತೀಯ ವಾಯುಸೇನೆಯ ಬೆನ್ನೆಲುಬಾಗಿ ಕೆಲಸ ಮಾಡಿದ್ದ ರಷ್ಯಾನಿರ್ಮಿತ ಮಿಗ್-21 ಯುದ್ಧವಿಮಾನಕ್ಕೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.ಈ ವೇಳೆ ಉಪಸ್ಥಿತರಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ , ‘ಮಿಗ್-21 ನಮ್ಮ ಸೇನಾ ವಾಯುಯಾನ ಪಯಣಕ್ಕೆ ಹಲವು ಹೆಮ್ಮೆಯ ಕ್ಷಣಗಳನ್ನು ಸೇರಿಸಿದೆ. ಅದು ಕೇವಲ ಒಂದು ವಿಮಾನ ಅಥವಾ ಯಂತ್ರವಲ್ಲ, ಭಾರತ-ರಷ್ಯಾ ನಡುವಿನ ಆಳವಾದ ಸಂಬಂಧಕ್ಕೆ ಸಾಕ್ಷಿ’ ಎಂದು ಬಣ್ಣಿಸಿದರು. ಶುಕ್ರವಾರ ಚಂಡೀಗಢದ ವಾಯುನೆಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ, ಏರ್ ಮಾರ್ಷಲ್ ಎ.ಪಿ. ಸಿಂಗ್ ಮಿಗ್-21 ವಿಮಾನದ ಅಂತಿಮ ಹಾರಾಟ ನಡೆಸಿ, ವಿದಾಯ ಹೇಳಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಯುಪಡೆಯ ಮಾಜಿ ಮುಖ್ಯಸ್ಥರಾದ ಎಸ್.ಪಿ. ತ್ಯಾಗಿ ಮತ್ತು ಬಿ.ಎಸ್. ಧನೋವಾ, ಗ್ರುಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ವೈಮಾನಿಕ ಪ್ರದರ್ಶನ:
ವಾಯುಪಡೆಯ ‘ಆಕಾಶಗಂಗಾ’ ಸ್ಕೈಡೈವಿಂಗ್ ತಂಡವು 8,000 ಅಡಿ ಎತ್ತರದಲ್ಲಿ ವೈಮಾನಿಕ ಪ್ರದರ್ಶನ ನೀಡಿತು. ನಂತರ 23 ಸ್ಕ್ವಾಡ್ರನ್‌ಗೆ ಸೇರಿದ ಮಿಗ್-21 ವಿಮಾನಗಳು ಅಂತಿಮ ವೈಮಾನಿಕ ಪ್ರದರ್ಶನ ನೀಡಿದವು. ಏರ್ ವಾರಿಯರ್ ತಂಡದಿಂದ ಕವಾಯತು ಮತ್ತು ನಿವೃತ್ತ ವಿಮಾನಕ್ಕೆ ವಂದನೆಗಳನ್ನು ಸಲ್ಲಿಸಲಾಯಿತು. ನಿವೃತ್ತಿ ನಂತರ ಏನಾಗುತ್ತದೆ?:ದೆಹಲಿಯ ಪಾಲಂನಲ್ಲಿರುವ ವಾಯುಪಡೆಯ ವಸ್ತುಸಂಗ್ರಹಾಲಯಲ್ಲಿ ನಿವೃತ್ತ ಮಿಗ್-21 ವಿಮಾನಗಳನ್ನು ಪ್ರದರ್ಶನಕ್ಕಿಡುವ ಸಾಧ್ಯತೆಯಿದೆ. ಕೆಲವು ವರದಿಗಳ ಪ್ರಕಾರ, ಕೆಲವು ಮಿಗ್-21 ವಿಮಾನಗಳು ಸುಸ್ಥಿತಿಯಲ್ಲಿರುವ ಕಾರಣ, ಅವುಗಳನ್ನು ವಿಂಟೇಜ್ ಸ್ಕ್ವಾಡ್ರನ್ ಆಗಿ ಬಳಸುವ ನಿರೀಕ್ಷೆಯಿದೆ.