ಸಾರಾಂಶ
ನವದೆಹಲಿ: ಹಾರುವ ಶವಪೆಟ್ಟಿಗೆ ಎಂಬ ಅಪಖ್ಯಾತಿಗೆ ಗುರಿಯಾಗಿದ್ದ ಸೋವಿಯತ್ ಒಕ್ಕೂಟ ನಿರ್ಮಿತ, ಭಾರತದ ಮೊದಲ ಸೂಪರ್‌ಸಾನಿಕ್ ಯುದ್ಧ ವಿಮಾನ ಮಿಗ್-21, 6 ದಶಕಗಳ ಬಳಿಕ ಭಾರತೀಯ ವಾಯುಪಡೆಗೆ ವಿದಾಯ ಹೇಳಲಿದೆ.
1963ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ್ದ ಮಿಗ್-21, ಸೆ.19ರಂದು ಕೊನೆಯ ಬಾರಿ ಚಂಡೀಗಢದಿಂದ ಹಾರಾಟ ನಡೆಸಲಿದೆ. ಸದ್ಯ ಭಾರತದಲ್ಲಿ ಮಿಗ್ 21 ವಿಮಾನಗಳ ಒಂದು ಸ್ವ್ಯಾಡ್ರನ್ ಇದ್ದು ಅದರಲ್ಲಿ 36 ವಿಮಾನಗಳು ಇವೆ ಎನ್ನಲಾಗಿದೆ.ಭಾರತದಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳಿಲ್ಲದ ಸಮಯದಲ್ಲಿ ಮಿಗ್ 21 ಏಕಾಂಗಿಯಾಗಿ ಭಾರತೀಯ ವಾಯುಪಡೆಯನ್ನು ಬಲಗೊಳಿಸಿ ಬ್ರಹ್ಮಾಸ್ತ್ರದಂತೆ ಕಣ್ಗಾವಲಿರಿಸಿದ್ದವು. 2000ನೇ ಇಸವಿಯಲ್ಲಿ ವಾಯುಪಡೆಗೆ ಸುಖೋಯ್ ಎಂ30, ಮಿರಾಜ್ ವಿಮಾನಗಳ ಆಗಮನದವರೆಗೂ ಮಿಗ್ 21 ವಿಮಾನಗಳು ಏಕಾಂಗಿಯಾಗಿ ಭಾರತದ ವಾಯುವಲಯವನ್ನು ರಕ್ಷಿಸುವ ಜೊತೆಗೆ ದಾಳಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದವು.
ಕಾಲಾನುಕ್ರಮದಲ್ಲಿ ಹೊಸ ಹೊಸ ಯುದ್ಧ ವಿಮಾನಗಳ ಆಗಮನದ ಹಿನ್ನೆಲೆಯಲ್ಲಿ ಭಾರತ ಇವುಗಳ ಉತ್ಪಾದನೆ ಸ್ಥಗಿತಗೊಳಿಸಿತ್ತು. ಅವುಗಳ ಬದಲಿಗೆ ಮಿರಾಜ್, ಸುಖೋಯ್, ರಫೇಲ್ ಮತ್ತು ಸ್ವದೇಶಿ ನಿರ್ಮಿತ ತೇಜಸ್ ಅನ್ನು ಸೇನೆಗೆ ಸೇರ್ಪಡೆ ಮಾಡುವ ಕೆಲಸ ಆರಂಭಿಸಿತ್ತು.ಎಲ್ಲಾ ಕದನಗಳಲ್ಲಿ ಮಿಗ್ ಪಾತ್ರ:1960-2000ರವರೆಗೆ ಭಾರತೀಯ ವಾಯುಪಡೆಗೆ ಭೀಮಬಲವಾಗಿದ್ದ ಮಿಗ್-21 ಎಲ್ಲಾ ಕದನ, ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ದಾಖಲೆ ಹೊಂದಿದೆ.
ಪ್ರಮುಖವಾಗಿ 1965 ಮತ್ತು 1972ರ ಯುದ್ಧದಲ್ಲಿ ಪಾಕಿಸ್ತಾನದ ಹುಟ್ಟಡಗಿಸಿತ್ತು. 1999ರ ಕಾರ್ಗಿಲ್ ಯುದ್ಧದಲ್ಲಿಯೂ ಇದನ್ನು ಪ್ರಮುಖವಾಗಿ ಬಳಸಲಾಗಿತ್ತು. ಇದಲ್ಲದೇ 2019ರ ಬಾಲಾಕೋಟ್ ವಾಯುದಾಳಿ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇದೇ ವಿಮಾನದಲ್ಲಿ ಅಮೆರಿಕ ನಿರ್ಮಿತ ಪಾಕಿಸ್ತಾನದ ಎಫ್-16 ವಿಮಾನ ಹೊಡೆದುರುಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದರು.
ಕಾರಣ ಮಿಗ್ 21 ವಿಮಾನವೊಂದು ಅಮೆರಿಕದ ಅತ್ಯಾಧುನಿಕ ಎಫ್ 16 ಹೊಡೆದುರುಳಿಸಿದ ಮೊದಲ ಘಟನೆ ಅದಾಗಿತ್ತು.
ಭಾರೀ ಸಂಗ್ರಹ:ಮಿಗ್ 21 ವಿಮಾನಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿಯ ಉತ್ತುಂಗದದಲ್ಲಿ ಇದ್ದ ವೇಳೆ, ಭಾರತವು ಸೋವಿಯತ್‌ನಿಂದ ಹೊರಗೆ ಅತಿ ಹೆಚ್ಚು ಮಿಗ್-21 (900+) ಹೊಂದಿದ್ದ ದೇಶವಾಗಿತ್ತು. ಆ ಪೈಕಿ 840 ಭಾರತದಲ್ಲಿಯೇ ತಯಾರಾಗಿತ್ತು. 1990ರಲ್ಲಿ ಒಂದು ಮಿಗ್ ವಿಮಾನದ ಬೆಲೆಯು 10 ಕೋಟಿ ರು. ಇತ್ತು ಎನ್ನಲಾಗಿದೆ.
ಹಾರುವ ‘ಶವಪೆಟ್ಟಿಗೆ’:ಈ ವಿಮಾನವು ಒಂದೆಡೆ ಭಾರತದ ವಾಯುಪಡೆಯನ್ನು ಬಲಗೊಳಿಸಿದ್ದರೆ, ಇನ್ನೊಂದೆಡೆ ಇದಕ್ಕೆ ‘ಹಾರುವ ಶವಪೆಟ್ಟಿಗೆ’ ಎಂಬ ಅಪಖ್ಯಾತಿಯೂ ಬಂದಿತ್ತು. ಏಕೆಂದರೆ 1966-1984ರಲ್ಲಿ ಭಾರತದಲ್ಲಿ ತಯಾರಾದ 840 ಮಿಗ್-21ಗಳ ಪೈಕಿ ಅರ್ಧದಷ್ಟು ಅಪಘಾತಗೊಂಡಿದ್ದವು. ಇದರಿಂದಾಗಿ 200ಕ್ಕೂ ಹೆಚ್ಚು ಪೈಲಟ್‌ಗಳು, 50ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದರು.