-ಕೆಲವರ ಪ್ರಭಾವದಿಂದ ಆ ರೀತಿ ಮಾತಾಡಿದೆ
-ಇದೇ ನನ್ನ ಮೊದಲ, ಕೊನೆಯ ತಪ್ಪು, ಕ್ಷಮಿಸಿಪಿಟಿಐ ನವದೆಹಲಿಜಂತರ್ ಮಂತರ್ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವೈರಲ್ ಆಗಿದ್ದ ಹುಡುಗಿ ಶನಿವಾರ ವಿಡಿಯೋ ಮೂಲಕ ದೇಶದ ಕ್ಷಮೆಯಾಚಿಸಿದ್ದಾಳೆ. ಜತೆಗೆ, ಕೆಲವರ ಪ್ರಭಾವಕ್ಕೆ ಒಳಗಾಗಿ ಆ ರೀತಿ ಮಾತಾಡಿದ್ದೆ ಎಂದು ತಿಳಿಸಿದ್ದಾಳೆ. ಶುಕ್ರವಾರ ರಾತ್ರಿ ಆಕೆಯ ಬೈಗುಳಗಳನ್ನು ಉಲ್ಲೇಖಿಸಿ ವಿಡಿಯೋ ಮಾಡಿದ್ದ ಪ್ರಧಾನಿ, ‘ನನ್ನ ಸ್ವರ್ಗೀಯ ತಾಯಿಯನ್ನು ನಿಂದಿಸಿದ್ದಕ್ಕೆ ನೋವಾಗಿದೆ. ಆದರೆ ಮಕ್ಕಳನ್ನು ಶಿಕ್ಷಿಸುವ ಬದಲು ಸರಿದಾರಿಗೆ ತರುವುದು ನಮ್ಮ ಜವಾಬ್ದಾರಿ’ ಎಂದು ನೊಂದು ನುಡಿದಿದ್ದರು. ಆ ಬೆನ್ನಲ್ಲೇ ಹುಡುಗಿ ಕ್ಷಮೆ ಯಾಚಿಸಿದ್ದಾಳೆ.‘ನಾನು ಜುಲೈನಲ್ಲಿ ಸ್ನೇಹಿತರೊಂದಿಗೆ ಕನ್ನಾಟ್ ಪ್ಲೇಸ್‌ಗೆ ಹೋಗಿದ್ದೆ. ಅಲ್ಲಿ ಪ್ರಧಾನಿ ವಿರುದ್ಧ ಅವಾಚ್ಯ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದ ಜನರ ಗುಂಪೊಂದು ಎದುರಾಯಿತು. ಅವರು ನನ್ನ ಮೇಲೆ ಪ್ರಭಾವ ಬೀರಿ, ನಾನೂ ಅದೇ ರೀತಿ ಮಾತಾಡುವಂತೆ ಪ್ರೇರೇಪಿಸಿದರು. ನಾನು ಹಾಗೆಯೇ ಮಾಡಿದೆ. ನಾನು ಇಡೀ ದೇಶದ ಜನರಲ್ಲಿ ನನ್ನನ್ನು ಕ್ಷಮಿಸುವಂತೆ ಕೋರುತ್ತೇನೆ. ನನಗೆ ಕೇವಲ 15 ವರ್ಷ ವಯಸ್ಸು. ಇದೇ ನನ್ನ ಮೊದಲ ಮತ್ತು ಕೊನೆಯ ತಪ್ಪು. ಇಂತಹ ಕೃತ್ಯವನ್ನು ಇನ್ನೆಂದೂ ಮಾಡುವುದಿಲ್ಲ’ ವಿಡಿಯೋದಲ್ಲಿ ತಿಳಿಸಿದ್ದಾಳೆ.