ಸಾರಾಂಶ
ಆಂಧ್ರಪ್ರದೇಶದ ಗ್ರೀನ್‌ಫೀಲ್ಡ್ ರಾಜಧಾನಿಯಾದ ‘ಅಮರಾವತಿ’ಯ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 2ರಂದು ಮರುಚಾಲನೆ ನೀಡಲಿದ್ದಾರೆ. ಅಮರಾವತಿ ನಿರ್ಮಾಣಕ್ಕೆ 2015ರ ಅ.22ರಂದು ಪ್ರಧಾನಿ ಮೋದಿ ಮೊದಲನೆ ಬಾರಿ ಚಾಲನೆ ನೀಡಿದ್ದರು.
ಅಮರಾವತಿ: ಆಂಧ್ರಪ್ರದೇಶದ ಗ್ರೀನ್‌ಫೀಲ್ಡ್ ರಾಜಧಾನಿಯಾದ ‘ಅಮರಾವತಿ’ಯ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 2ರಂದು ಮರುಚಾಲನೆ ನೀಡಲಿದ್ದಾರೆ. ಅಮರಾವತಿ ನಿರ್ಮಾಣಕ್ಕೆ 2015ರ ಅ.22ರಂದು ಪ್ರಧಾನಿ ಮೋದಿ ಮೊದಲನೆ ಬಾರಿ ಚಾಲನೆ ನೀಡಿದ್ದರು.
ಜಗನ್ ಅವಧಿಯಲ್ಲಿ ಮೂಲೆಗುಂಪು:
ಅಮರಾವತಿಯನ್ನು ‘ದೇವತೆಗಳ ರಾಜಧಾನಿ’ ಎಂದು ಕರೆಯುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಪಾಲಿಗೆ ಇದು ಕನಸಿನ ಯೋಜನೆಯಾಗಿದ್ದು, 2014-19ರ ಅವಧಿಯಲ್ಲಿ ಸಚಿವಾಲಯ, ಹೈಕೋರ್ಟ್, ಅಧಿಕಾರಿಗಳ ನಿವಾಸದಂತಹ ತಾತ್ಕಾಲಿಕ ರಚನೆಗಳನ್ನು ನಿರ್ಮಿಸಲಾಗಿತ್ತು. ಇದಕ್ಕಾಗಿ ರೈತರು ಸೇರಿ ವಿವಿಧ ಮೂಲಗಳಿಂದ 54,000 ಎಕರೆ ಭೂಮಿಯನ್ನು ಪಡೆಯಲಾಗಿತ್ತು. ಆದರೆ 2019ರಿಂದ 2024ರ ವರೆಗೆ ಅಧಿಕಾರದಲ್ಲಿದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರ ಈ ಯೋಜನೆಯನ್ನು ಮೂಲೆಗುಂಪಾಗಿಸಿತು.
ಮತ್ತೆ ಮರುಜೀವ:
ಈಗ ಅಮರಾವತಿ ನಿರ್ಮಾಣಕ್ಕೆ ಮರುಜೀವ ಕೋಡಲು ನಾಯ್ಡು ಹೊರಟಿದ್ದಾರೆ. ಒಟ್ಟು 8,603 ಚದರ ಕಿ.ಮೀ. ಜಾಗವನ್ನು ರಾಜಧಾನಿ ಪ್ರದೇಶವೆಂದು ನಿಗದಿಪಡಿಸಲಾಗಿದ್ದು, ಅದರಲ್ಲಿ 217 ಚದರ ಕಿ.ಮೀ. ರಾಜಧಾನಿ ನಗರವಾದರೆ, 16.9 ಚದರ ಕಿ.ಮೀ. ಪ್ರಮುಖ ರಾಜಧಾನಿ ಪ್ರದೇಶವಾಗಿರಲಿದೆ. ಇದರಲ್ಲೇ 9 ವಿಷಯಾಧಾರಿತ ನಗರಗಳೂ ತಲೆಯೆತ್ತಲಿವೆ. ಇದಕ್ಕೆ ತಗುಲಲಿರುವ ವೆಚ್ಚ 77,249 ಕೋಟಿ ರು. ಎಂದು ನಾಯ್ಡು ತಿಳಿಸಿದ್ದಾರೆ.
ಇನ್ನೂ 40,000 ಎಕರೆ ಭೂಮಿಯನ್ನು ಇದಕ್ಕೆ ಸೇರಿಸಿಕೊಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಒಳಗೊಂಡ ಮೆಗಾಸಿಟಿ ನಿರ್ಮಾಣದ ಕನಸೂ ನಾಯ್ಡು ಅವರ ಕಣ್ಣಲ್ಲಿದೆ.
ಇದೇ ವೇಳೆ ಮೋದಿಯವರು ಕೃಷ್ಣ ಜಿಲ್ಲೆಯಲ್ಲಿ ಕ್ಷಿಪಣಿ ಪರೀಕ್ಷಾ ಕೇಂದ್ರ ಹಾಗೂ ವಿಶಾಖಪಟ್ಟಣಂನಲ್ಲಿ ಪಿಎಂ ಏಕತಾ ಮಾಲ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.