ಸಾರಾಂಶ
ರೈತ ಶ್ರೀಶೈಲ ತೇಲಿ ಅವರ ಬಗ್ಗೆ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ : ಶೀತ ವಾತಾವರಣವಿರುವ ಕಾಶ್ಮೀರ ಹಾಗೂ ಹಿಮಾಚಲಪ್ರದೇಶದಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದ ಬಾಗಲಕೋಟೆಯಲ್ಲಿ ಬೆಳೆದು ಗಮನಸೆಳೆದಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಅವರ ಬಗ್ಗೆ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಲವರು ಈವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಈ ಬಾರಿ ಮೆಚ್ಚುಗೆ ಗಿಟ್ಟಿಸಿದ್ದಾರೆ. ಭಾನುವಾರ ಪ್ರಸಾರವಾದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡಾಡಿರುವುದು ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
- ಶೀತ ವಲಯದ ಬೆಳೆಯನ್ನು ಉಷ್ಣ ವಲಯ
ಶ್ರೀಶೈಲ ತೇಲಿ ಅವರು ಸೇಬು ಬೆಳೆದ ರೀತಿ ಹಾಗೂ ಪರಿಶ್ರಮವನ್ನು ಕೊಂಡಾಡಿರುವ ಮೋದಿ ಅವರು, ಮೊದಲೆಲ್ಲ ಶೀತ ವಲಯದಲ್ಲಿ ಸೇಬು ಬೆಳೆಯಲಾಗುತಿತ್ತು. ಆದರೆ ಕರ್ನಾಟಕದ ಉಷ್ಣ ವಲಯದಲ್ಲೂ ಸೇಬು ಬೆಳೆದಿದ್ದು ಗಮನಾರ್ಹವಾಗಿದೆ. 35 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶವಿರುವ ಪ್ರದೇಶದಲ್ಲಿ ಸೇಬು ಬೆಳೆದು ಲಾಭ ಪಡೆದ ರೈತನ ಯಶೋಗಾಥೆ ಮಾದರಿ ಎಂದು ಹೇಳಿದರು.
ಸಾಹಸಿ ರೈತ ಶ್ರೀಶೈಲ ತೇಲಿ:
ಯಾರು ಈ ರೈತ?ಶ್ರೀಶೈಲ ತೇಲಿ ಅವರು ಮೂಲತಃ ಬೆಳಗಾವಿಯ ಜಿಲ್ಲೆ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದವರು. ಕೆಲ ವರ್ಷಗಳ ಹಿಂದೆ ಕುಳಲಿ ಗ್ರಾಮದ ವ್ಯಾಪ್ತಿಯಲ್ಲಿ ಜಮೀನು ಖರೀದಿ ಮಾಡಿ ಸೇಬು ಕೃಷಿ ಮಾಡಿ ಭರ್ಜರಿ ಫಸಲು ತೆಗೆದಿದ್ದಾರೆ. ಏಳು ಎಕರೆ ಜಮೀನಿನಲ್ಲಿ 2620 ಸಸಿ ನಾಟಿ ಮಾಡಿದ್ದು, ಸಸಿಗಳ ಆರೈಕೆಗೆ ಜೀವಾಮೃತ, ಸಾವಯವ ಗೊಬ್ಬರ ಬಳಕೆ ಮಾಡಿದ್ದಾರೆ. ಮಹಾರಾಷ್ಟ್ರದ ಶಿರಡಿಯಿಂದ ಅನ್ಸಾರಿ, ಹರ್ಮನ್ 99, ಗೋಲ್ಡನ್ ಡಾಟ್ ಎಂಬ ತಳಿಯ ಸಸಿ ತಂದು ನಾಟಿ ಮಾಡಿರುವ ಅವರು ಮೊದ ಮೊದಲು ಪ್ರಾಯೋಗಿಕ ಬೆಳೆಯನ್ನಾಗಿ ಬೆಳೆದಿದ್ದರು. ನಂತರ ಅಧಿಕ ಇಳುವರಿ, ಕಡಿಮೆ ಖರ್ಚಿನ ಹಿನ್ನೆಲೆಯಲ್ಲಿ ಸೇಬು ಬೆಳೆ ಕಡೆ ಗಮನ ಹರಿಸಿ ಪ್ರತಿಗಿಡಕ್ಕೆ ನೂರರಿಂದ ನೂರಿಪ್ಪತ್ತು ಹಣ್ಣುಗಳು ಬರುವ ರೀತಿಯಲ್ಲಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ.
7 ಎಕರೆಯಲ್ಲಿ 10*10 ಜಾಗದಲ್ಲಿ ಸಸಿ ನಾಟಿ ಮಾಡಿ, ಕಾಶ್ಮೀರ ಮೀರಿಸುವ ರುಚಿಯ ಸೇಬು ಬೆಳೆದು ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಜಮಖಂಡಿ, ಮಹಾಲಿಂಗಪುರ, ಮುಧೋಳ, ಬೀಳಗಿ, ರಾಯಬಾಗ ಸೇರಿದಂತೆ ಸುತ್ತಮುತ್ತಲಿನ ನಗರಪ್ರದೇಶಗಳಿಗೆ ರವಾನೆ ಮಾಡಿ, ಪ್ರತಿ ಕೆಜಿಗೆ ₹80-150 ವರೆಗೆ ಮಾರಾಟ ಮಾಡುತ್ತಿದ್ದಾರೆ.
₹150ನಂತೆ ಸಸಿ ತಂದಿದ್ದ ರೈತ ಶ್ರೀಶೈಲ ತೇಲಿ ಅವರು 2 ವರ್ಷ 1 ತಿಂಗಳ ಸಸಿಗಳಿಂದ ಸದ್ಯ 6-7 ಟನ್ ಸೇಬು ಮಾರಾಟ ಮಾಡಿದ್ದಾರೆ. ಈವರೆಗೂ ಬೆಳೆಗಳಿಗೆ ಹಾಕಿದ ಹಣ ವಾಪಸ್ ಆಗಿದ್ದು, ಇನ್ಮುಂದೆ ಲಾಭದ ನಿರೀಕ್ಷೆಯಲ್ಲಿ ರೈತ ಶ್ರೀಶೈಲ ತೇಲಿ ಇದ್ದಾರೆ.