ಸಾರಾಂಶ
ಕದನ ವಿರಾಮ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ್ದಾರೆ.
ನವದೆಹಲಿ: ಕದನ ವಿರಾಮ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮೂರೂ ಸೇನಾ ಮುಖ್ಯಸ್ಥರು ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಜತೆ ಪ್ರಧಾನಿ ಮೋದಿ ಭೇಟಿಯಾಗಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ಭಾರತ-ಪಾಕ್ ಕದನ ವಿರಾಮಕ್ಕೆ ಜಾಗತಿಕ ನಾಯಕರ ಹರ್ಷ
ಲಂಡನ್/ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ತಕ್ಷಣದ ಕದನ ವಿರಾಮದ ನಿರ್ಣಯವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ, ವಿಶ್ವಸಂಸ್ಥೆ ಸೇರಿದಂತೆ ಹಲವು ಜಾಗತಿಕ ನಾಯಕರು ಬೆಂಬಲಿಸಿದ್ದಾರೆ.
‘ಕದನ ವಿರಾಮದಲ್ಲಿ ತೊಡಗಿಕೊಳ್ಳಲು ಕಠಿಣ ಪರಿಶ್ರಮ ಮತ್ತು ಇಚ್ಛೆ ತೋರಿದ ಭಾರತ ಮತ್ತು ಪಾಕಿಸ್ತಾನದ ನಾಯಕರಿಗೆ ಧನ್ಯವಾದಗಳು’ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.
ಈ ಕ್ರಮವನ್ನು ಬ್ರಿಟನ್ ಸ್ವಾಗತಿಸಿದ್ದು, ಎರಡೂ ರಾಷ್ಟ್ರಗಳು ಉದ್ವಿಗ್ನತೆಯನ್ನು ಶಮನಗೊಳಿಸುವತ್ತ ತಮ್ಮ ಹೆಜ್ಜೆಗಳನ್ನು ಮುಂದುವರಿಸಬೇಕೆಂದು ಕರೆ ನೀಡಿದೆ.
‘ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವು ಅತ್ಯಂತ ಸ್ವಾಗತಾರ್ಹ. ಎರಡೂ ದೇಶಗಳು ಇದನ್ನು ಉಳಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಉದ್ವಿಗ್ನತೆಯನ್ನು ಶಮನಗೊಳಿಸುವುದು ಎಲ್ಲರ ಹಿತಾಸಕ್ತಿಯಾಗಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಹೇಳಿದ್ದಾರೆ.
ವಿಶ್ವಸಂಸ್ಥೆ ಸಹ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಸ್ವಾಗತಿಸಿದ್ದು, ‘ಸಂಘರ್ಷವನ್ನು ಶಮನಗೊಳಿಸಲು ಭಾರತ ಮತ್ತು ಪಾಕ್ ಕೈಗೊಂಡ ಎಲ್ಲಾ ಪ್ರಯತ್ನಗಳು ಸ್ವಾಗತಾರ್ಹ’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಈ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ್ದು, ‘ಪಾಕಿಸ್ತಾನ ಶಾಂತಿಪ್ರಿಯ ರಾಷ್ಟ್ರ. ನಮ್ಮ ದೇಶ ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ಸರ್ವಶಕ್ತನಾದ ಅಲ್ಲಾಹನಿಗೆ ಧನ್ಯವಾದಗಳು. ಪಾಕಿಸ್ತಾನದ ಪ್ರಧಾನಿ, ಸೇನಾ ಮುಖ್ಯಸ್ಥರಿಗೆ ಅಭಿನಂದನೆಗಳು’ ಎಂದಿದ್ದಾರೆ.
ಕದನ ವಿರಾಮ: ಪಂಜಾಬ್‌ನಲ್ಲಿ ಬ್ಲ್ಯಾಕೌಟ್ ವಾಪಸ್
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿ ಬೆನ್ನಲ್ಲೇ ಪಂಜಾಬ್‌ನ ಕೆಲವು ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ಬ್ಲ್ಯಾಕೌಟ್‌ನ್ನು ಅಧಿಕಾರಿಗಳು ವಾಪಸ್ ಪಡೆದಿದ್ದಾರೆ. ಮತ್ತೊಂದೆಡೆ ಪಾಕ್‌ನಲ್ಲಿ ವಿಮಾನ ನಿಲ್ದಾಣಗಳು ಕಾರ್ಯಾರಂಭಿಸಿದೆ.
ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಹಿನ್ನೆಲೆಯಲ್ಲಿ ಪಂಜಾಬ್‌ನ ಕೆಲ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ 8 ರಿಂದ ಭಾನುವಾರ ಬೆಳಿಗ್ಗೆ 6ರ ತನಕ ಬ್ಲ್ಯಾಕೌಟ್ ಭಾಗವಾಗಿ ವಿದ್ಯುತ್ ಕಡಿತಕ್ಕೆ ಅಧಿಕಾರಿಗಳು ಆದೇಶಿಸಿದ್ದರು. ಆದರೆ ಕದನ ವಿರಾಮ ಜಾರಿಬೆನ್ನಲ್ಲೇ ಎಲ್ಲಾ ನಿರ್ಬಂಧಿತ ಆದೇಶಗಳನ್ನು ಆಡಳಿತ ಹಿಂತೆಗೆದುಕೊಂಡಿದ್ದು, ಸಹಜ ಸ್ಥಿತಿಗೆ ಮರಳಿದೆ. ಮತ್ತೊಂದೆಡೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶಗಳನ್ನು ಪುನಾರಂಭಿಸಿದ್ದು, ‘ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಸಾಮಾನ್ಯ ಕಾರ್ಯಚರಣೆಗೆ ಲಭ್ಯವಿದೆ’ ಎಂದು ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ.
ಭಾರತ- ಪಾಕ್ ಕದನ ವಿರಾಮ: ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಶ್ಲಾಘನೆ
ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ಸಂರ್ಷಕ್ಕೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿಯಾಗಿರುವುದನ್ನು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಶ್ಲಾಘಿಸಿದ್ದು,‘ಕದನ ವಿರಾಮ ಒಪ್ಪಂದಕ್ಕೆ ಬಂದ ಭಾರತ ಮತ್ತು ಪಾಕಿಸ್ತಾನದ ನಾಯಕರಿಗೆ ಧನ್ಯವಾದಗಳು’ ಎಂದಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಅಮೆರಿಕ ಅಧ್ಯಕ್ಷರ ತಂಡದಿಂದ ವಿಶೇಷವಾಗಿ ಕಾರ್ಯದರ್ಶಿ ರುಬಿಯೋ ಅವರಿಂದ ಉತ್ತಮ ಕೆಲಸ. ಈ ಕದನ ವಿರಾಮದಲ್ಲಿ ತೊಡಗಿಕೊಳ್ಳಲು ಕಠಿಣ ಪರಿಶ್ರಮ ಮತ್ತು ಇಚ್ಛೆ ತೋರಿದ ಭಾರತ ಮತ್ತು ಪಾಕಿಸ್ತಾನದ ನಾಯಕರಿಗೆ ಧನ್ಯವಾದಗಳು’ ಎಂದಿದ್ದಾರೆ.