ಸಾರಾಂಶ
ನವದೆಹಲಿ: ‘ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂದೂರ’ ಹಾಗೂ ಭಾರತೀಯ ಸೇನೆ ಕುರಿತು ಮಾತನಾಡುವಾಗ ಎಚ್ಚರ ವಹಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಆಪರೇಷನ್ ಸಿಂದೂರ ಮತ್ತು ಸೇನೆಯ ಯೋಧರ ಬಗ್ಗೆ ಬಿಜೆಪಿ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪಕ್ಷದ ಕೆಲ ನಾಯಕರು ಕೀಳು ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗುವ ಜೊತೆಗೆ ವಿಪಕ್ಷಗಳಿಗೆ ವಾಗ್ದಾಳಿಗೆ ಹೊಸ ಅಸ್ತ್ರ ಕಲ್ಪಿಸಿತ್ತು.
ಈ ಹಿನ್ನೆಲೆಯಲ್ಲಿ ಭಾನುವಾರ ನಡೆದ ಎನ್‌ಡಿಎ ಸಿಎಂಗಳ ಸಭೆಯಲ್ಲಿ ಮಾತನಾಡಿದ ಮೋದಿ, ‘ಭಾಷಣ ಮಾಡುವಾಗ ಸಂಯಮ ಇರಲಿ. ಅನಗತ್ಯ ಹೇಳಿಕೆಗಳನ್ನು ಕೊಡಬೇಡಿ. ನಾಯಕರು ಎಲ್ಲೆಂದರಲ್ಲಿ ಮನಬಂದಂತೆ ಮಾತಾಡುವುದನ್ನು ನಿಲ್ಲಿಸಬೇಕು’ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋದಿ ಸೂಚನೆಗೆ ಕಾರಣವೇನು?:
ಇತ್ತೀಚೆಗೆ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ, ಆಪರೇಷನ್ ಸಿಂದೂರ್ ಬಗ್ಗೆ ದೇಶಕ್ಕೆ ಮಾಹಿತಿ ಕೊಟ್ಟ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಉಗ್ರರ ಸಹೋದರಿ’ ಎಂದು ಕರೆದಿದ್ದರು. ಇನ್ನು ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ, ‘ಪ್ರತಿಯೊಬ್ಬ ಸೈನಿಕನೂ ಪ್ರಧಾನಿ ಮೋದಿ ಅವರ ಕಾಲುಗಳಿಗೆ ನಮಸ್ಕರಿಸುತ್ತಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದಲ್ಲದೆ, ಮಧ್ಯಪ್ರದೇಶ ಬಿಜೆಪಿ ಸಂಸದರೊಬ್ಬರು, ‘ಪಹಲ್ಗಾಂನಲ್ಲಿ ಸಾವನ್ನಪ್ಪಿದ ಪುರುಷರ ಹೆಂಡಂದಿರು ಉಗ್ರರ ವಿರುದ್ಧ ಧೈರ್ಯದಿಂದ ಹೋರಾಡಬೇಕಿತ್ತು. ಹೇಡಿತನ ಪ್ರದರ್ಶಿಸಬಾರದಿತ್ತು’ ಎಂದಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟುಮಾಡಿತ್ತು. ಜೊತೆಗೆ ವಿಪಕ್ಷಗಳು ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಲು ಸರಕು ಒದಗಿಸಿತ್ತು.
ಸಿಂದೂರ ದೇಶದ ಶಕ್ತಿಯ ಪ್ರತಿಬಿಂಬ
ಆಪರೇಷನ್ ಸಿಂದೂರ ಕೇವಲ ಸೇನಾ ಕಾರ್ಯಾಚರಣೆ ಆಗಿರಲಿಲ್ಲ, ಭಾರತದ ಬದಲಾದ ಮುಖದ ಪ್ರತಿಬಿಂಬ. ಇದು ದೇಶದ ಸಂಕಲ್ಪ, ಸಾಹಸ, ವಿಶ್ವ ವೇದಿಕೆಯಲ್ಲಿ ಹೆಚ್ಚುತ್ತಿರುವ ಶಕ್ತಿಯ ಪ್ರತಿಫಲನ.
- ನರೇಂದ್ರ ಮೋದಿ ಪ್ರಧಾನ ಮಂತ್ರಿ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))