ಸಾರಾಂಶ
ಭಾರತವು 12 ದಿನಗಳ ಅತ್ಯಂತ ಯೋಜಿತ ಲೆಕ್ಕಾಚಾರ ಹಾಕಿ ದಾಳಿ ಮಾಡಿದ್ದು ಈಗ ಸಾಬೀತಾಗಿದೆ. ಅಲ್ಲದೆ, ಮೇ 7ರಂದು ಭಾರತದಲ್ಲಿ ಅಣಕು ಯುದ್ಧದ ತಾಲೀಮು ನಡೆಸುವ ಘೋಷಣೆ ಮಾಡಿದ್ದ ಮೋದಿ, ಇದೇ ನೆಪದಲ್ಲಿ ಪಾಕಿಸ್ತಾನದ ಹಾದಿ ತಪ್ಪಿಸಿದ್ದು ಸಾಬೀತಾಗಿದೆ.
ನವದೆಹಲಿ: ಏ.22 ರಂದು ಪಹಲ್ಗಾಂನಲ್ಲಿ ಭಾರತೀಯ ಮಹಿಳೆಯರ ಸಿಂಧೂರವನ್ನು ಅಪವಿತ್ರಗೊಳಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತವು 12 ದಿನಗಳ ಅತ್ಯಂತ ಯೋಜಿತ ಲೆಕ್ಕಾಚಾರ ಹಾಕಿ ದಾಳಿ ಮಾಡಿದ್ದು ಈಗ ಸಾಬೀತಾಗಿದೆ. ಅಲ್ಲದೆ, ಮೇ 7ರಂದು ಭಾರತದಲ್ಲಿ ಅಣಕು ಯುದ್ಧದ ತಾಲೀಮು ನಡೆಸುವ ಘೋಷಣೆ ಮಾಡಿದ್ದ ಮೋದಿ, ಇದೇ ನೆಪದಲ್ಲಿ ಪಾಕಿಸ್ತಾನದ ಹಾದಿ ತಪ್ಪಿಸಿದ್ದು ಸಾಬೀತಾಗಿದೆ.
‘ಆಪರೇಷನ್ ಸಿಂಧೂರ್ ಅನ್ನು ರೂಪಿಸಲು ಸುಮಾರು 8–9 ದಿನಗಳು ಬೇಕಾಯಿತು, ಅದೇ ಕಾರ್ಯಾಚರಣೆಯ ಅಡಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಘಟಕಗಳು ಮತ್ತು ಶಿಬಿರಗಳನ್ನು ಗುರಿಯಾಗಿಸುವ ಕಾರ್ಯತಂತ್ರವನ್ನು ಪರಿಷ್ಕರಿಸಲು ಇನ್ನೂ 3-4 ದಿನ ಬೇಕಾಯಿತು. ಅತ್ಯಂತ ಗುಪ್ತವಾಗಿ ಈ ಕಾರ್ಯಾಚರಣೆ ನಡೆಸಬೇಕೆಂಬ ಉದ್ದೇಶ ಇರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಸತತ 12 ದಿನಗಳ ಕಾಲ ಉನ್ನತ ರಕ್ಷಣಾ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರ ಜತೆ ಸಭೆ ನಡೆಸಿದರು’ ಎಂದು ಮೂಲಗಳು ಹೇಳಿವೆ.‘
ಶತ್ರುಗಳು ಮತ್ತು ಅದರ ಗುಪ್ತಚರ ಜಾಲಗಳನ್ನು ಸಂಪೂರ್ಣ ಗೊಂದಲದ ಸ್ಥಿತಿಯಲ್ಲಿಡಲು ಭಾರತ ನಿರಂತರವಾಗಿ ತನ್ನ ಕಾರ್ಯತಂತ್ರ ರೂಪಿಸಿತು. ಮೇ 7ರಂದು ಯುದ್ಧತಾಲೀಮು ನಡೆಸುವುದಾಗಿ ಘೋಷಿಸಿತು. ಆಗ ಪಾಕಿಸ್ತಾನವು ಯುದ್ಧತಾಲೀಮು ಮುಗಿವವರೆಗೆ ತನ್ನ ಮೇಲೆ ದಾಳಿ ಆಗದು ಎಂದು ಭಾವಿಸಿತ್ತು. ಆದರೆ ಯುದ್ಧತಾಲೀಮಿಗೆ 1 ದಿನ ಮುನ್ನವೇ ತಡರಾತ್ರಿ ಏಕಾಏಕಿ ಪಾಕ್ ಉಗ್ರ ತಾಣಗಳ ಮೇಳೆ ಭಾರತ ವಾಯುದಾಳಿ ಮಾಡಿತು. ಪಾಕಿಸ್ತಾನವು ನಿರೀಕ್ಷೆಯೇ ಮಾಡದಿದ್ದ ಪೆಟ್ಟು ನೀಡಿತು. ಇದು ಮೋದಿ ತಂತ್ರಗಾರಿಕೆ ಆಗಿತ್ತು. ಈ ಹಿಂದೆ ಬಾಲಾಕೋಟ್ ದಾಳಿ ವೇಳೆಯೂ ಮೋದಿ ಇದೇ ರೀತಿ ಪಾಕ್ ಗಮನವನ್ನು ಬೇರೆಡೆ ಸೆಳೆದು ದಾಳಿ ಕೈಗೊಂಡಿದ್ದರು’ ಎಂದು ಮೂಲಗಳು ಹೇಳಿವೆ.
‘ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿಯೆಂದರೆ, ಪ್ರಧಾನಿ ನರೇಂದ್ರ ಮೋದಿ ಈ ಎಲ್ಲಾ ಕಾರ್ಯಾಚರಣೆಗಳ ಸಮಯದಲ್ಲಿ ರಾತ್ರಿಯಿಡೀ ಮೇಲ್ವಿಚಾರಣೆ ನಡೆಸುತ್ತಿದ್ದರು.ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ದೃಢನಿಶ್ಚಯ ಹೊಂದಿದ್ದರು’ ಎಂದು ಅವು ಹೇಳಿವೆ.