ಸಾರಾಂಶ
ಆಪರೇಷನ್ ಸಿಂಧೂರ್ " ಯಶಸ್ಸಿಗೆ ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಶ್ರೀ ಭಾರತೀಯ ಸೇನಾ ಪಡೆಯನ್ನು ಶ್ಲಾಘಿಸಿದ್ದಾರೆ.
ಶಿರಸಿ: "ಆಪರೇಷನ್ ಸಿಂಧೂರ್ " ಯಶಸ್ಸಿಗೆ ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಶ್ರೀ ಭಾರತೀಯ ಸೇನಾ ಪಡೆಯನ್ನು ಶ್ಲಾಘಿಸಿದ್ದಾರೆ.
ಮೊದಲನೆಯದಾಗಿ ಯಾವುದೇ ನಾಗರಿಕರ ಮೇಲೆ ಆಕ್ರಮಣ ಮಾಡದೇ ಉಗ್ರರ ತಾಣಗಳ ಮೇಲೆ ಮಾತ್ರವೇ ಆಕ್ರಮಣ ನಡೆದಿರುವುದನ್ನು ಉಲ್ಲೇಖಿಸಿದ ಸ್ವಾಮೀಜಿ, ಪಹಲ್ಗಾಮ್‌ನಲ್ಲಿ ಉಗ್ರರು ನಮ್ಮ ದೇಶದ ನಾಗರಿಕರ ಮೇಲೆ ದಾಳಿ ಮಾಡಿದ್ದರು. ಆದರೆ ಅದಕ್ಕೆ ಉತ್ತರ ನೀಡಿದ ನಮ್ಮ ಸೈನಿಕರು ನಾಗರಿಕರ ಮೇಲೆ ಆಕ್ರಮಣ ಮಾಡದೇ ಆದರ್ಶ ಮೆರೆದಿದ್ದಾರೆ ಎಂದಿದ್ದಾರೆ.ಎರಡನೆಯದಾಗಿ ಶಿಸ್ತಿನ ಕಾರ್ಯಾಚರಣೆ ಮಾಡಿದ್ದಾರೆ. ಕೇವಲ ೨೫ ನಿಮಿಷಗಳಲ್ಲಿ ಭೂಸೇನೆ ಮತ್ತು ವಾಯುಸೇನೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಿವೆ. ಈ ಮೂಲಕ ಈ ದೇಶದ ಸೈನಿಕರ ಶಿಸ್ತು-ಸಮರ್ಪಣಾ ಭಾವವನ್ನು ಮತ್ತೊಮ್ಮೆ ವಿಶ್ವದ ಮುಂದೆ ತೋರಿಸಿದ್ದಾರೆ ಎಂದಿದ್ದಾರೆ.
ಮೂರನೇಯದಾಗಿ ’ಸಿಂಧೂರ್ ’ ಎಂಬ ಹೆಸರಿಗೆ ತಕ್ಕಂತೆ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವೋಮಿಕಾ ಸಿಂಗ್ ಎಂಬ ಇಬ್ಬರು ಮಹಿಳೆಯರ ನೇತೃತ್ವದಲ್ಲಿ ನಡೆದ ಆಕ್ರಮಣ ಇದು. ಸಿಂಧೂರ ಎಂದರೆ ತಿಲಕ ಹಚ್ಚುವ ಕುಂಕುಮ. ಅದು ನಮ್ಮ ಧಾರ್ಮಿಕ ಭಾವನೆಗಳ ಪ್ರೇರಕವೂ ಹೌದು. ಪಹಲ್ಗಾಮ್‌ನಲ್ಲಿ ಉಗ್ರರ ಆಕ್ರಮಣದ ವೇಳೆಯಲ್ಲಿ ಪ್ರತ್ಯಕ್ಷ ಅಲ್ಲಿದ್ದು ಸ್ವಲ್ಪವೇ ಅಂತರದಲ್ಲಿ ಪಾರಾಗಿ ಬಂದವರನ್ನು ನಾವು ಭೇಟಿಯಾಗಿದ್ದೇವೆ. ಉಗ್ರರು ಧರ್ಮವನ್ನು ಕೇಳಿ ಗುಂಡು ಹಾಕಿದ್ದು ಸತ್ಯ ಎಂಬುದನ್ನು ಅವರು ಹೇಳಿದ್ದಾರೆ. ಉಗ್ರವಾದಿಗಳು ಧರ್ಮವನ್ನು ಗುರಿಯಾಗಿಸಿ ಇಟ್ಟುಕೊಂಡಿದ್ದರೆ, ನಮ್ಮ ಸೈನಿಕರು ನ್ಯಾಯಯುತವಾಗಿ ಉಗ್ರವಾದವನ್ನೇ ಗುರಿಯಾಗಿಸಿಟ್ಟುಕೊಂಡು ಆಕ್ರಮಣ ಮಾಡಿದ್ದಾರೆ, ಧರ್ಮವನ್ನಲ್ಲ ಎಂದು ಪ್ರಕಟಣೆಯಲ್ಲಿ ಶ್ರೀಗಳು ವಿಶ್ಲೇಷಿಸಿದ್ದಾರೆ.