ಡೆಹ್ರಾಡೂನ್‌: ತಮ್ಮ 67ನೇ ಜನ್ಮದಿನದಂದು ದೃಷ್ಟಿಮಾಂದ್ಯ ಮಕ್ಕಳಿಂದ ಹಾಡಿನ ರೂಪದಲ್ಲಿ ಶುಭಾಶಯಗಳನ್ನು ಸ್ವೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹನಿಗಣ್ಣಾದ ಘಟನೆ ಶುಕ್ರವಾರ ನಡೆದಿದೆ. 3 ದಿನಗಳ ಉತ್ತರಾಖಂಡ ಪ್ರವಾಸದಲ್ಲಿರುವ ಅವರು ದೃಷ್ಟಿ ವಿಕಲಚೇತನ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆಗೆ (ಎನ್‌ಐಇಪಿವಿಡಿ) ಭೇಟಿ ನೀಡಿದ್ದರು.

 ಅಲ್ಲಿ ಮಕ್ಕಳು ತಮಗಾಗಿ ಹಾಡಿದ ಹಾಡನ್ನು ಕೇಳಿ ಭಾವುಕರಾದ ಮುರ್ಮು, ‘ನನಗೆ ಕಣ್ಣಿರು ತಡೆಯಲಾಗಲಿಲ್ಲ. ಅವರೆಲ್ಲರೂ ಸುಶ್ರಾವ್ಯವಾಗಿ, ಹೃದಯದಿಂದ ಹಾಡುತ್ತಿದ್ದರು. ಅವರಲ್ಲಿ ಕೆಲ ವೈಕಲ್ಯಗಳಿದ್ದರೂ ವಿಶೇಷ ಸಾಮರ್ಥ್ಯವನ್ನೂ ಹೊಂದಿದ್ದಾರೆ’ ಎಂದು ವೇದಿಕೆ ಮೇಲೆಯೇ ಆನಂದಬಾಷ್ಪ ಸುರಿಸಿದ್ದಾರೆ.

 ಇದೇ ವೇಳೆ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಎಲ್ಲರನ್ನೂ ಶ್ಲಾಘಿಸುತ್ತಾ, ‘ಭಾರತದ ಇತಿಹಾಸವು ದಯೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಉದಾಹರಣೆಗಳಿಂದ ತುಂಬಿದೆ. ಮಕ್ಕಳೆಲ್ಲರೂ ಶಿಕ್ಷಣದಿಂದ ಸಬಲರಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು’ ಎಂದರು.


ಬೆಳಗಾವಿ ಗಡಿ ವಿವಾದ ಪರಿಹಾರಕ್ಕೆ ಮಹಾ ಉನ್ನತ ಸಮಿತಿ

ಮುಂಬೈ: ಬೆಳಗಾವಿಯಲ್ಲಿನ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮಹಾರಾಷ್ಟ್ರ ಉನ್ನತ ಸಮಿತಿಯನ್ನು ಪುನಾರಚಿಸಿದೆ. ಈ ಸಮಿತಿಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ವಹಿಸಿದ್ದು, ಇದರಲ್ಲಿ ಉಪಮುಖ್ಯಮಂತ್ರಿಗಳಾದ ಏಕನಾಥ್‌ ಶಿಂಧೆ, ಅಜಿತ್‌ ಪವಾರ್‌, ಮಾಜಿ ಸಿಎಂ ನಾರಾಯಣ ರಾಣೆ, ಶರದ್ ಪವಾರ್‌ ಮತ್ತು ಪೃಥ್ವಿರಾಜ್‌ ಚೌಹಾಣ್‌ ಸಹ ಇದರಲ್ಲಿದ್ದಾರೆ. ಈ ಸಮಿತಿಯು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ನಿರ್ಧಾರ ಕೈಗೊಂಡು ತೀರ್ಮಾನಕ್ಕೆ ಬರಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಸರ್ಕಾರಿ ನಿರ್ಣಯ ತಿಳಿಸಿದೆ. ಹಿಂದೆ ಏಕನಾಥ ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದಾಗ ಸಮಿತಿ ರಚಿಸಲಾಗಿತ್ತು. ಆದರೆ ಯಾವುದೇ ನಿರ್ಧಾರ ಬಂದಿರಲಿಲ್ಲ.

ಸಣ್ಣ ಉಡಾವಣಾ ವಾಹಕ ಗುತ್ತಿಗೆ ಎಚ್ಎಎಲ್‌ಗೆ

ನವದೆಹಲಿ: ಸಣ್ಣ ಉಪಗ್ರಹ ಉಡಾವಣಾ ವಾಹಕದ (ಎಸ್‌ಎಸ್‌ಎಲ್‌ವಿ) ತಂತ್ರಜ್ಞಾನದ ಬಿಡ್ಡಿಂಗ್‌, ಬೆಂಗಳೂರಿನ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌) ಪಾಲಾಗಿದೆ. ದೇಶದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಎಸ್‌ಎಸ್‌ಎಲ್‌ವಿ ರಾಕೆಟ್‌ಗಳು, 10ರಿಂದ 500 ಕೆ.ಜಿ. ತೂಗುವ ಉಪಗ್ರಹಗಳನ್ನು ಭೂಮಿಯ ಕೆಳಕಕ್ಷೆಗೆ ಕೊಂಡೊಯ್ಯಲು ಬಳಸಲಾಗುತ್ತದೆ.

ಅದಾನಿ ಡಿಫೆನ್ಸ್ ಸಿಸ್ಟಂ ಮತ್ತು ತಂತ್ರಜ್ಞಾನ ಬೆಂಬಲಿತ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ನೇತೃತ್ವದ 2 ಸಂಸ್ಥೆಗಳು ಮತ್ತು ಭಾರತ್ ಡೈನಾಮಿಕ್ಸ್ ಲಿ. ಅನ್ನು ಹಿಂದಿಕ್ಕ ಎಚ್‌ಎಎಲ್‌ ಈ ಹರಾಜನ್ನು ಗೆದ್ದಿದೆ.ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ ಅಧ್ಯಕ್ಷ ಪವನ್ ಗೋಯೆಂಕಾ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿ, ‘ಇನ್ನು 2 ವರ್ಷ ಇಸ್ರೋ ಎಚ್‌ಎಎಲ್‌ ಅನ್ನು ನಿಯಂತ್ರಿಸಲಿದ್ದು, ಈ ಅವಧಿಯಲ್ಲಿ ಒಂದೇ ವಿನ್ಯಾಸ ಮತ್ತು ಪೂರೈಕೆದಾರರೊಂದಿಗೆ 2 ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಆದರೆ ರಾಕೆಟ್‌ನ ವಿನ್ಯಾಸವನ್ನು ಸುಧಾರಿಸಿ ತನ್ನದೇ ಆದ ಮಾರಾಟಗಾರರನ್ನು ಆಯ್ಕೆ ಮಾಡಲು ಎಚ್‌ಎಎಲ್‌ಗೆ ಅವಕಾಶವಿದೆ’ ಎಂದು ತಿಳಿಸಿದರು.ಎಸ್‌ಎಸ್‌ಎಲ್‌ವಿ ಉತ್ಪಾದಿಸುವುದು ಎಚ್‌ಎಎಲ್‌ ಪಾಲಿಗೆ ಹೆಮ್ಮೆ ಎಂದು ಹಣಕಾಸು ನಿರ್ದೇಶಕ ಬಿ.ಸೇನಾಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

ಬಡವರ ಇಂಗ್ಲಿಷ್ ಕಲಿಕೆ ಬಿಜೆಪಿಗೆ ಇಷ್ಟವಿಲ್ಲ: ಶಾಗೆ ರಾಗಾ ಟಾಂಗ್

ನವದೆಹಲಿ: ‘ಇಂಗ್ಲಿಷ್ ಮಾತಾಡುವವರು ನಾಚಿಕೆ ಪಡುವ ದಿನಗಳು ದೂರವಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.‘ಬಡವರ ಮಕ್ಕಳು ಇಂಗ್ಲಿಷ್ ಕಲಿಯುವುದು ಬಿಜೆಪಿ-ಆರ್‌ಎಸ್‌ಎಸ್‌ಗೆ ಇಷ್ಟವಿಲ್ಲ. ಏಕೆಂದರೆ ಅವರು ಪ್ರಶ್ನಿಸುವುದು ಮತ್ತು ಸಮಾನತೆ ಸಾಧಿಸುವುದನ್ನು ಬಿಜೆಪಿ-ಆರ್‌ಎಸ್‌ಎಸ್‌ ಬಯಸುವುದಿಲ್ಲ’ ಎಂದು ಟೀಕಿಸಿದ್ದಾರೆ.

‘ಇಂಗ್ಲಿಷ್ ಅಣೆಕಟ್ಟಲ್ಲ, ಸೇತುವೆ. ಅದು ನಾಚಿಕೆಗೇಡಿನದ್ದಲ್ಲ, ಸಬಲೀಕರಣಗೊಳಿಸುವ ಭಾಷೆ. ಇಂದಿನ ಜಗತ್ತಿನಲ್ಲಿ, ಇಂಗ್ಲಿಷ್ ಮಾತೃಭಾಷೆಯಷ್ಟೇ ಮುಖ್ಯವಾಗಿದೆ. ಏಕೆಂದರೆ ಅದು ಉದ್ಯೋಗ ಒದಗಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಭಾರತೀಯ ಭಾಷೆಗಳ ಜತೆಯಲ್ಲಿ ಪ್ರತಿ ಮಗುವಿಗೆ ಇಂಗ್ಲಿಷ್ ಕಲಿಸಬೇಕು’ ಎಂದಿದ್ದಾರೆ.ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ‘ವಿದೇಶಿ ಭಾಷೆಗಳಿಗಿಂತ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಇಂಗ್ಲಿಷ್ ಮಾತಾಡುವವರು ನಾಚಿಕೆ ಪಡುವ ದಿನಗಳು ಶೀಘ್ರ ನಿರ್ಮಾಣವಾಗುತ್ತವೆ’ ಎಂದಿದ್ದರು.

ರಿಸರ್ವ್ಡ್‌ ಸೀಟುಗಳ 25%ಗೆ ವೇಟಿಂಗ್‌ ಲಿಸ್ಟ್‌ ಮಿತಿ ನಿಗದಿ

ಮುಂಬೈ: ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಿ ಟಿಕೆಟ್ ವ್ಯವಸ್ಥೆಯನ್ನು ಸುಗಮಗೊಳಿಸುವ ಸಲುವಾಗಿ, ಪರಿಷ್ಕರಣೆಯ ಮೂಲಕ ವೈಟಿಂಗ್‌ ಲಿಸ್ಟ್‌ ಅನ್ನು ರೈಲಿನಲ್ಲಿರುವ ಕಾಯ್ದಿರಿಸಬಲ್ಲ ಸೀಟುಗಳ ಸಾಮರ್ಥ್ಯದ ಶೇ.25ಕ್ಕೆ ನಿರ್ಬಂಧಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ.ಈವರೆಗೆ ಇಂತಹ ಯಾವುದೇ ಮಿತಿ ಇರಲಿಲ್ಲವಾದ ಕಾರಣ, ಸ್ಲೀಪರ್‌ ಕ್ಲಾಸ್‌ಗಳಲ್ಲಿ 300 ಹಾಗೂ ಎಸಿ ಕೋಚ್‌ಗಳಲ್ಲಿ 150ಕ್ಕೂ ಅಧಿಕ ಜನ ವೇಟಿಂಗ್‌ ಲಿಸ್ಟ್‌ನಲ್ಲಿರುತ್ತಿದ್ದರು. ಇದರಿಂದ ವಿಶೇಷವಾಗಿ ಹಬ್ಬದ ಸಮಯದಲ್ಲಿ ಅವ್ಯವಸ್ಥೆ ಉಂಟಾಗುತ್ತಿತ್ತು. ಇದನ್ನು ನಿವಾರಿಸುವ ಸಲುವಾಗಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಎಲ್ಲಾ ರೈಲ್ವೆ ಜೋನ್‌ಗಳಿಗೆ ನಿರ್ದೇಶನ ಹೊರಡಿಸಲಾಗಿದೆ. ಇದಕ್ಕೆ ತಕ್ಕಂತೆ ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ ಅಗತ್ಯ ಸಾಫ್ಟ್‌ವೇರ್‌ ಬದಲಾವಣೆಗಳನ್ನು ಮಾಡಲಿದ್ದು, ಮಿತಿ ಜಾರಿಯಾಗುವ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು.

ಲೆಕ್ಕ ಹೇಗೆ?:

ಒಂದು ಕೋಚ್‌ನಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ವಿದೇಶಿ ಪ್ರವಾಸಿಗರು, ಅಂಗವಿಕಲರಿಗೆ ಇರುವ ಮೀಸಲು ಸೀಟುಗಳನ್ನು ಹೊರತುಪಡಿಸಿ 400 ಸೀಟುಗಳಿದ್ದರೆ, ಆಗ 100 ಪ್ರಯಾಣಿಕರು ಮಾತ್ರ ವೇಟಿಂಗ್‌ ಲಿಸ್ಟ್‌ನಲ್ಲಿ ಇರುತ್ತಾರೆ. ಈ ಬದಲಾವಣೆಯು ಸ್ಲೀಪರ್‌, ಸೆಕಂಡ್‌ ಎಸಿ, ಥರ್ಡ್‌ ಎಸಿ, ಚೇರ್‌ ಕಾರ್‌, ತತ್ಕಾಲ್‌ ಸೇರಿದಂತೆ ಎಲ್ಲಾ ಕ್ಲಾಸ್‌ಗಳಿಗೆ ಅನ್ವಯಿಸಲಿದೆ.ಆದರೆ, ರಿಯಾಯಿತಿ ದರಗಳಲ್ಲಿ ಅಥವಾ ಸರ್ಕಾರಿ ವಾರಂಟ್‌ಗಳ ಅಡಿಯಲ್ಲಿ ನೀಡಲಾಗುವ ಟಿಕೆಟ್‌ಗಳಿಗೆ ಈ ಮಿತಿ ಅನ್ವಯಿಸುವುದಿಲ್ಲ.