ಸಾರಾಂಶ
ಭುವನೇಶ್ವರ: ‘ವಿದೇಶದಲ್ಲಿ ಓದಿ ಬಂದ ಬಿಜೆಡಿ ನಾಯಕ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ಗೆ ಒಡಿಶಾದ ಗಂಧ ಗಾಳಿಯೇ ಗೊತ್ತಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳ ಹೆಸರು ಹಾಗೂ ಅವುಗಳ ರಾಜಧಾನಿಗಳ ಹೆಸರನ್ನು ನವೀನ್ ಹೇಳಬಲ್ಲರೆ?’ ಎಂದು ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದರು.
ಒಡಿಶಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ‘ಒಡಿಶಾದ ಅಸ್ಮಿತೆ ಅಪಾಯದಲ್ಲಿದೆ. ಬಿಜೆಪಿ ಅದನ್ನು ರಕ್ಷಿಸಲಿದೆ. ಕೇಂದ್ರ ಹಾಗೂ ಒಡಿಶಾದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಸ್ಥಾಪನೆಯಾಗಲಿದೆ.
ಒಡಿಶಾದ ಭಾಷೆ ಹಾಗೂ ಸಂಸ್ಕೃತಿಯನ್ನು ಅರಿತಿರುವ ಈ ನೆಲದ ಮಣ್ಣಿನ ಮಗನನ್ನು ಮುಖ್ಯಮಂತ್ರಿ ಮಾಡುತ್ತೇವೆ’ ಎಂದರು.‘ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದರೂ ರಾಜ್ಯದ ಜನರನ್ನು ಬಡವರನ್ನಾಗಿಯೇ ಇರಿಸಿರುವ ಬಿಜೆಡಿಯನ್ನು ಅಧಿಕಾರದಿಂದ ಕಿತ್ತೊಗೆಯುತ್ತೇವೆ.
ಒಡಿಶಾ ಶ್ರೀಮಂತ ರಾಜ್ಯ, ಆದರೆ ಇಲ್ಲಿನ ಬಹುತೇಕ ಜನರು ಬಡವರಾಗಿದ್ದಾರೆ’ ಎಂದು ಪಟ್ನಾಯಕ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.ಬಿಜೆಪಿಯು ಒಡಿಶಾದ ಬುಡಕಟ್ಟು ಹೆಣ್ಣುಮಗಳನ್ನು ದೇಶದ ರಾಷ್ಟ್ರಪತಿ ಮಾಡಿದೆ. ಅವರು ಎಲ್ಲಾ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದಾರೆ. 26 ವರ್ಷಗಳ ಹಿಂದೆ ಇದೇ ದಿನ ಪೋಖ್ರಾಣ್‌ನಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಣುಬಾಂಬ್ ಪರೀಕ್ಷೆ ನಡೆಸಿ ಜಗತ್ತಿನಲ್ಲೇ ಭಾರತದ ಘನತೆಯನ್ನು ಎತ್ತರಕ್ಕೇರಿಸಿತು ಎಂದು ಮೋದಿ ಸ್ಮರಿಸಿದರು.