-ಮಹಾರಾಷ್ಟ್ರದ ನಾಂದೇಡ್‌ನಲ್ಲಿ ವಿಶೇಷ ಮದುವೆ

-ಪೇಠಕರ್‌ ಕುಟುಂಬದಿಂದ ಇಡೀ ಊರಿಗೆ ವಿಮೆ!ಪುಣೆ: ವಿವಾಹ ಸಮಾರಂಭದಲ್ಲಿ ಬಂಧು ಮಿತ್ರರಿಗೆ ತರಹೇವಾರಿ ಉಡುಗೊರೆಗಳನ್ನು ಕೊಡುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯ ಕುಟುಂಬವೊಂದು ಊರಿನ ಸುಮಾರು 3,500 ಜನರಿಗೆ ತಲಾ 1 ಲಕ್ಷ ರು.ಗಳ ಅಪಘಾತ ವಿಮೆ ಮಾಡಿಸಿ ಮಾದರಿಯಾಗಿದೆ.

ಬಹದ್ದೂರ್‌ಪುರ ಗ್ರಾಮದಲ್ಲಿ ಸಿದ್ಧೇಶ್ವರ ಪೇಠಕರ್‌ ಹಾಗೂ ಮಂಜುಷಾ ವಿವಾಹ ಇತ್ತೀಚೆಗೆ ನೆರವೇರಿತು. ಈ ವೇಳೆ ಪೇಠಕರ್‌ ಕುಟುಂಬದವರು ತಮ್ಮ ಊರಿನ ಬಹುತೇಕ ಅಷ್ಟೂ ಜನಕ್ಕೆ 1 ಲಕ್ಷ ರು.ಗಳ ಅಪಘಾತ ವಿಮೆ ಮಾಡಿಸಿದ್ದಾರೆ. ಈ ವಿಮಾ ಯೋಜನೆ 1 ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ.‘ಗ್ರಾಮದ ಬಹುತೇಕ ಜನರು ಕೂಲಿಕಾರರು ಅಥವಾ ರೈತರು. ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಡಿತ, ಕಾಡುಪ್ರಾಣಿಗಳ ದಾಳಿ, ಸಿಡಿಲಿನ ಹೊಡೆತ, ರಸ್ತೆ ಅಪಘಾತ ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಕುಟುಂಬಗಳು ಆರ್ಥಿಕ ತೊಂದರೆಗೆ ಒಳಗಾಗುತ್ತವೆ ಎಂಬುದನ್ನು ಗಮನಿಸಿ ಈ ಉಪಕ್ರಮ ತೆಗೆದುಕೊಂಡಿದ್ದೇವೆ’ ಎಂದು ಸಿದ್ಧೇಶ್ವರ ತಿಳಿಸಿದ್ದಾರೆ.

== ಈ ಸುದ್ದಿ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮದುಮಕ್ಕಳ ಕ್ರಮಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಶಿವಸೇನೆ ಸಂಸದ ಮಿಲಿಂದ್ ದೇವರಾ ಇದನ್ನು ಪ್ರೇರಣಾದಾಯಕ ಎಂದು ಶ್ಲಾಘಿಸಿದ್ದಾರೆ.