ಸಾರಾಂಶ
ನವದೆಹಲಿ: ‘ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ಅಗತ್ಯವಿಲ್ಲ’ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಹಾಗೂ ವೈವಾಹಿಕ ಅತ್ಯಾಚಾರದ ವಿಷಯವು ಕಾನೂನು ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ಅಪರಾಧೀಕರಣಗೊಳಿಸಿದರೆ ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸಿದೆ.
ವೈವಾಹಿಕ ಅತ್ಯಾಚಾರ ಅಪರಾಧವೇ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಈ ಬಗ್ಗೆ ಕೋರ್ಟಿಗೆ ಸರ್ಕಾರ ತನ್ನ ಅಭಿಪ್ರಾಯವನ್ನು ಅಫಿಡವಿಟ್ ಮುಖಾಂತರ ಸಲ್ಲಿಸಿದೆ. ‘ಈ ವಿಷಯವನ್ನು ನಿಭಾಯಿಸಲು ಸೂಕ್ತ ದಂಡನಾತ್ಮಕ ಕ್ರಮಗಳು ಈಗಾಗಲೇ ಇವೆ. ಗಂಡನು ಹೆಂಡತಿಯ ಸಮ್ಮತಿ ಪಡೆದೇ ಸಂಬಂಧ ಬೆಳೆಸಬೇಕು ನಿಜ.
ಇದನ್ನು ಉಲ್ಲಂಘಿಸುವ ಮೂಲಭೂತ ಹಕ್ಕು ಆತನಿಗಿಲ್ಲ. ಆದಾಗ್ಯೂ ಒಂದು ವೇಳೆ ಗಂಡನು ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯನ್ನೂ ಅಪರಾಧ ವ್ಯಾಪ್ತಿಗೆ ತಂದರೆ ವೈವಾಹಿಕ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ’ ಎಂದು ಹೇಳಿದೆ.‘ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲು ಸುಪ್ರೀಂ ಕೋರ್ಟ್‌ನ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲ.
ಎಲ್ಲಾ ಪಾಲುದಾರರೊಂದಿಗೆ ಸರಿಯಾದ ಸಮಾಲೋಚನೆ ಇಲ್ಲದೆ ಅಥವಾ ಎಲ್ಲಾ ರಾಜ್ಯಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಈ ಸಮಸ್ಯೆಯನ್ನು (ವೈವಾಹಿಕ ಅತ್ಯಾಚಾರ) ನಿರ್ಧರಿಸಲಾಗುವುದಿಲ್ಲ’ ಎಂದು ಕೇಂದ್ರ ಹೇಳಿದೆ.