ಗಡಿ ದಾಟಿ ಬಂದು ಭಾರತೀಯರ ಕೊಂದರೆ ಪ್ರತೀಕಾರ ಅನಿವಾರ್ಯ

| N/A | Published : May 26 2025, 01:12 AM IST / Updated: May 26 2025, 04:39 AM IST

ಸಾರಾಂಶ

ಉಗ್ರರಿಗೆ ಪೋಷಣೆ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಅಭಿಪ್ರಾಯ ರೂಪಿಸುವ ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿ ಅಮೆರಿಕಕ್ಕೆ ಕಳುಹಿಸಿಕೊಟ್ಟಿರುವ ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಿರುವ ತರೂರ್‌ ಅವರು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಯಾರ್ಕ್‌: ಪಹಲ್ಗಾಂ ದಾಳಿಯಂಥ ಉಗ್ರದಾಳಿಗಳಿಗೆ ಸೇನಾ ಕಾರ್ಯಾಚರಣೆ ಮೂಲಕ ಸೂಕ್ತ ಪ್ರತ್ಯುತ್ತರ ನೀಡುವುದು ಇನ್ನು ಮುಂದೆ ಮಾಮೂಲಿಯಾಗಲಿದೆ. ಇನ್ನು ಮುಂದೆ ಪಾಕಿಸ್ತಾನದಲ್ಲಿ ಕೂತವರು ಸುಲಭವಾಗಿ ಗಡಿದಾಟಿಕೊಂಡು ಬಂದು ಭಾರತೀಯ ನಾಗರಿಕರನ್ನು ಯಾವುದೇ ಭಯವಿಲ್ಲದೆ ಹತ್ಯೆ ಮಾಡಬಹುದು ಎಂಬು ಭಾವಿಸುವಂತಿಲ್ಲ. ಅಂಥ ಕೃತ್ಯಕ್ಕಾಗಿ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಸಂಸದ ಶಶಿ ತರೂರ್‌ ಎಚ್ಚರಿಸಿದ್ದಾರೆ.

ಉಗ್ರರಿಗೆ ಪೋಷಣೆ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಅಭಿಪ್ರಾಯ ರೂಪಿಸುವ ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿ ಅಮೆರಿಕಕ್ಕೆ ಕಳುಹಿಸಿಕೊಟ್ಟಿರುವ ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಿರುವ ತರೂರ್‌ ಅವರು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಯಾರ್ಕ್‌ನಲ್ಲಿ ಭಾರತದ ರಾಯಭಾರ ಕಚೇರಿಯಿಂದ ಇಂಡೋ-ಅಮೆರಿಕನ್‌ ಸಮುದಾಯ, ಮಾಧ್ಯಮಗಳು ಮತ್ತು ಚಿಂತಕರ ಚಾವಡಿಗಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ನಾವು ಏನನ್ನೂ ಆರಂಭ ಮಾಡಿಲ್ಲ. ಕೇವಲ ಉಗ್ರರಿಗಷ್ಟೇ ಸಂದೇಶ ರವಾನಿಸುತ್ತಿದ್ದೇವೆ. ನೀವು ಆರಂಭಿಸಿದ್ದೀರಿ, ನಾವು ಪ್ರತಿಕ್ರಿಯಿಸಿದ್ದೇವೆ. ನೀವು ನಿಲ್ಲಿಸಿದರೆ, ನಾವೂ ನಿಲ್ಲಿಸುತ್ತೇವೆ ಎಂಬುದು ಎಂದರು.

ನಾವು ಪಾಕಿಸ್ತಾನದ ಜತೆಗೆ ಯುದ್ಧ ನಡೆಸಲು ಆಸಕ್ತಿ ಹೊಂದಿಲ್ಲ. ನಮ್ಮ ಆಸಕ್ತಿಯೇನಿದ್ದರೂ ನಮ್ಮ ಆರ್ಥಿಕತೆ ಮತ್ತು ನಮ್ಮ ಜನರ ಬೆಳವಣಿಗೆಯಷ್ಟೇ ಆಗಿದೆ ಎಂದು ತಿಳಿಸಿದರು.

ಪಾಕಿಸ್ತಾನ ಇಟ್ಟುಕೊಂಡಿರುವಂಥ ಯಾವುದೇ ದುರಾಸೆ ನಮಗಿಲ್ಲ. ನಮ್ಮದು ಯಥಾಸ್ಥಿತಿ ಕಾಯ್ದುಕೊಳ್ಳಬಯಸುವ ದೇಶ, ಆದರೆ ಪಾಕಿಸ್ತಾನವು ಸ್ಥಾಪಿತ ಸಿದ್ಧಾಂತವಾದಿ ಶಕ್ತಿಯಾಗಿದೆ. ಅವರು ನಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಬೇಕೆಂದು ಬಯಸುತ್ತಾರೆ, ಅದಕ್ಕೆ ಯಾವುದೇ ಬೆಲೆ ತೆರಲು ಅವರು ಸಿದ್ಧರಿದ್ದಾರೆ ಎಂದರು.

ಒಂದು ವೇಳೆ ಸಂಪ್ರದಾಯಿಕ ಯುದ್ಧದಿಂದ ತಾವು ಬಯಸಿದ್ದನ್ನು ಪಡೆಯಲು ಸಾಧ್ಯವಿಲ್ಲವಾದರೆ ಭಯೋತ್ಪಾದನೆ ಮೂಲಕ ಪಡೆಯಲು ಯತ್ನಿಸುತ್ತಾರೆ. ಇದು ನಮಗೆ ಸ್ವೀಕಾರ್ಹವಲ್ಲ. ಇದೇ ಸಂದೇಶವನ್ನು ಇಲ್ಲಿಂದ ನಾವು ನೀಡಬಯಸುತ್ತೇವೆ ಎಂದರು.

ಹಲವು ವರ್ಷಗಳಿಂದ ಭಾರತವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಾಕ್ಷ್ಯಗಳನ್ನು ಸಲ್ಲಿಸುವುದು, ನಿರ್ಬಂಧಗಳ ಸಮಿತಿ ಮುಂದೆ ಹೋಗುವುದು ಮತ್ತು ರಾಯಭಾರಿ ಹೋರಾಟ ನಡೆಸುವುದು ಸೇರಿ ಎಲ್ಲವನ್ನೂಪ್ರಯತ್ನಿಸಿ ನೋಡಿದ್ದೇವೆ. ಪಾಕಿಸ್ತಾನ ಭಯೋತ್ಪಾದನೆಯಲ್ಲಿ ತನ್ನ ಪಾತ್ರವನ್ನು ನಿರಾಕರಿಸುತ್ತಲೇ ಬಂದಿದೆ. ಭಯೋತ್ಪಾದಕರನ್ನು ಶಿಕ್ಷಿಸುವುದಾಗಲಿ, ಭಯೋತ್ಪಾದನಾ ಮೂಲಸೌಲಭ್ಯಗಳನ್ನು ನಾಶ ಮಾಡುವಂಥ ಯಾವುದೇ ಪ್ರಯತ್ನ ಮಾಡಿಲ್ಲ. ಭಯೋತ್ಪಾದಕರು ಅಲ್ಲಿ ಮುಕ್ತವಾಗಿ ಕಾರ್ಯಾಚರಿಸುತ್ತಿದ್ದಾರೆ ಎಂದು ತಿಳಿಸಿದರು.

ಆಪರೇಷನ್‌ ಸಿಂದೂರ ಮೂಲಕ ಕರಾರುವಕ್ಕಾಗಿ ಉಗ್ರರ ನೆಲೆಗಳನ್ನು ನಾಶ ಮಾಡಿದ್ದೇವೆ. ನಮಗೆ ಸ್ವಯಂರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ. ನಾವು ಆ ಹಕ್ಕು ಚಲಾಯಿಸಿದ್ದೇವೆ. ನಾವು ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ ಎಂದರು.

ಶಶಿತರೂರ್‌ ನೇತೃತ್ವದ ನಿಯೋಗವು ಅಮೆರಿಕವಷ್ಟೇ ಅಲ್ಲದೆ, ಗಯಾನ, ಪನಾಮ, ಕೊಲಂಬಿಯಾ, ಬ್ರೆಜಿಲ್‌ ದೇಶಗಳಿಗೂ ಭೇಟಿ ನೀಡಿ, ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡುವ ಪ್ರಯತ್ನ ನಡೆಸಲಿದೆ.

Read more Articles on