ಕಾಶ್ಮೀರದಿಂದ ಪ್ರವಾಸಿಗರ ‘ವಾಪಸ್‌ ಪರ್ವ’ - 6 ಗಂಟೆಯಲ್ಲಿ 3,337 ಪ್ರವಾಸಿಗರು ವಾಪಸ್‌

| N/A | Published : Apr 24 2025, 12:05 AM IST / Updated: Apr 24 2025, 04:32 AM IST

ಸಾರಾಂಶ

ಪಹಲ್ಗಾಮ್‌ ಉಗ್ರ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರದಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕಣಿವೆ ವಾಪಸ್‌ ಹೋಗುತ್ತಿದ್ದು, ಇದರಿಂದ ವಿಮಾನ ನಿಲ್ದಾಣದಲ್ಲಿ ನೂಕು-ನುಗ್ಗಲಿನ ಸ್ಥಿತಿ ನಿರ್ಮಾಣವಾಗಿದೆ.  

ಶ್ರೀನಗರ: ಪಹಲ್ಗಾಮ್‌ ಉಗ್ರ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರದಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕಣಿವೆ ವಾಪಸ್‌ ಹೋಗುತ್ತಿದ್ದು, ಇದರಿಂದ ವಿಮಾನ ನಿಲ್ದಾಣದಲ್ಲಿ ನೂಕು-ನುಗ್ಗಲಿನ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಸುಮಾರು ಆರು ಗಂಟೆಗಳಲ್ಲಿ 3,337 ಮಂದಿ ಪ್ರವಾಸಿಗರು ಕಾಶ್ಮೀರದಿಂದ ವಾಪಸ್‌ ಹೋಗಿದ್ದಾರೆ.

ಈ ನಡುವೆ, ಶ್ರೀನಗರದಿಂದ ದೇಶದ ವಿವಿಧೆಡೆ ತೆರಳುವ ವಿಮಾನಗಳಿಗೆ ಭಾರೀ ಬೇಡಿಕೆ ಇದ್ದು, ಇಂಡಿಗೋ, ಏರ್‌ ಇಂಡಿಯಾ ಮತ್ತು ಸ್ಪೈಟ್‌ಜೆಟ್‌ ವಿಮಾನಯಾನ ಸಂಸ್ಥೆಗಳು ದೆಹಲಿ ಮತ್ತು ಮುಂಬೈ ನಡುವೆ ಹೆಚ್ಚುವರಿ ವಿಮಾನಗಳ ಓಡಾಟ ಆರಂಭಿಸಿವೆ.

ಇದೇ ವೇಳೆ ಶ್ರೀನಗರ ಏರ್ಪೋರ್ಟ್‌ಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರಯಾಣಿಕರಿಗೆ ನೀರು, ಆಹಾರದ ವ್ಯವಸ್ಥೆ ಮಾಡಲಾಗಿದೆ. ಟರ್ಮಿನಲ್‌ ಹೊರಗೆ ಹೆಚ್ಚುವರಿ ಟೆಂಟ್‌ಗಳನ್ನೂ ಹಾಕಿ ‍ವಿಶ್ರಾಂತಿಗೆ ಅ‍ವಕಾಶ ಮಾಡಿಕೊಡಲಾಗಿದೆ.

ದರ ಏರಿಕೆಗೆ ಬ್ರೇಕ್:

ವಿಮಾನ ಟಿಕೆಟ್‌ ದರ ಒಂದು ಹಂತದಲ್ಲಿ 20 ಸಾವಿರ ದಾಟಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಅವರು, ಪ್ರಯಾಣ ದರ ವಿಪರೀತ ಹೆಚ್ಚಿಸದಂತೆ ತಾಕೀತು ಮಾಡಿದ್ದಾರೆ. ಜತೆಗೆ ಟಿಕೆಟ್‌ ರದ್ದತಿ ಮತ್ತು ರೀ ಶೆಡ್ಯೂಲ್‌ ದರ ಹಾಕದಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಜೋಶಿ ಭೇಟಿ:

ಈ ನಡುವೆ ಸಚಿವ ರಾಮಮೋಹನ್‌ ನಾಯ್ಡು ಅವರನ್ನು ಭೇಟಿ ಮಾಡಿದ ಇನ್ನೊಬ್ಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶ್ರೀನಗರಕ್ಕೆ ಹೆಚ್ಚು ವಿಮಾನಗಳನ್ನು ಕಲ್ಪಿಸಲು ಕೋರಿದ್ದಾರೆ.

ಉಗ್ರರ ದಾಳಿ ಖಂಡನಾರ್ಹ. ಈ ದಾಳಿಗೆ ಬೆಚ್ಚಿ ನಮ್ಮ ಅತಿಥಿಗಳಾದ ಪ್ರವಾಸಿಗರು ತವರಿಗೆ ಮರಳುತ್ತಿರುವುದನ್ನು ನೋಡಿ ಬೇಸರವಾಗುತ್ತಿದೆ.

- ಒಮರ್‌ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ