156 ಚೀಲ, ಹಲವು ಕಪಾಟುಗಳಲ್ಲಿ ತುಂಬಿಟ್ಟಿದ್ದ ಹಣ ವಶ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದನ ಬಳಿ ₹220 ಕೋಟಿ ಕ್ಯಾಶ್‌ ಪತ್ತೆ!

| Published : Dec 09 2023, 01:15 AM IST

156 ಚೀಲ, ಹಲವು ಕಪಾಟುಗಳಲ್ಲಿ ತುಂಬಿಟ್ಟಿದ್ದ ಹಣ ವಶ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದನ ಬಳಿ ₹220 ಕೋಟಿ ಕ್ಯಾಶ್‌ ಪತ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಒಡಿಶಾದಲ್ಲಿ ಬೃಹತ್‌ ಕಾರ್‍ಯಾಚರಣೆ. ರಾಜ್ಯಸಭಾ ಸದಸ್ಯ, ಲಿಕ್ಕರ್‌ ಉದ್ಯಮಿ ಧೀರಜ್‌ ಸಾಹು ಸಂಪತ್ತು ಅನಾವರಣ. ಹಣ ಎಣಿಸಲು 30 ಜನ, 8 ಯಂತ್ರ ಬಳಕೆ. ಜಪ್ತಿಯಾದ ಹಣ ₹400 ಕೋಟಿ?. ರಾಜ್ಯಸಭಾ ಸದಸ್ಯ ಧೀರಜ್‌ ಸಾಹುಗೆ ಸೇರಿದ ಒಡಿಶಾದ ವಿವಿಧೆಡೆ ತೆರಿಗೆ ದಾಳಿ. ಬುಧವಾರ ಆರಂಭವಾದ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಕೆ. ಈವರೆಗೆ 220 ಕೋಟಿ ರು. ನಗದು ಪತ್ತೆ. ಇನ್ನೂ ನಡೆಯುತ್ತಿದೆ ಎಣಿಕೆ ಕಾರ್ಯ. ಧೀರಜ್‌ ಬಳಿ ಪತ್ತೆಯಾದ ಹಣದ ಮೌಲ್ಯ 400 ಕೋಟಿ ರು. ಇರುವ ಅಂದಾಜು. ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಇದು. ಬಲ್ಡಿಯಾ ಸಾಹು ಎಂಬ ಮದ್ಯ ತಯಾರಿಕೆ ಹಾಗೂ ಮಾರಾಟ ಸಂಸ್ಥೆಯ ಮೇಲೂ ದಾಳಿ. ಇದು ಒಡಿಶಾದ ಅತಿದೊಡ್ಡ ಮದ್ಯ ತಯಾರಿಕೆ, ಮಾರಾಟ ಕಂಪನಿ. ಸಾಹು ಒಡೆತನದ್ದು.

ಯಾರು ಈ ಧೀರಜ್‌ ಸಾಹು?

ಜಾರ್ಖಂಡ್‌ ಮೂಲದ ಉದ್ಯಮಿ ಹಾಗೂ ರಾಜಕಾರಣಿ. 64 ವರ್ಷ. 1980ರಿಂದ 89ರವರೆಗೆ ಜಾರ್ಖಂಡ್‌ನ ರಾಂಚಿ ಕ್ಷೇತ್ರದ ಸಂಸದರಾಗಿದ್ದ ಶಿವಪ್ರಸಾದ್‌ ಸಾಹು ಅವರ ಸೋದರ. ವಿದ್ಯಾರ್ಥಿ ನಾಯಕರಾಗಿ ಕಾಂಗ್ರೆಸ್‌ ಪ್ರವೇಶಿಸಿದ ಧೀರಜ್‌ ಈಗಲೂ ಅದೇ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ. 2010ರಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ.ಭುವನೇಶ್ವರ: ತೆರಿಗೆ ವಂಚನೆ ಆರೋಪದ ಮೇಲೆ ಒಡಿಶಾದ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಧೀರಜ್‌ ಸಾಹು ಅವರಿಗೆ ಸೇರಿದ ವಿವಿಧ ಸ್ಥಳಗಳು ಹಾಗೂ ಸಂಸ್ಥೆಗಳ ಮೇಲೆ 3 ದಿನಗಳಿಂದ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದ್ದು, ಶುಕ್ರವಾರ ಸಂಜೆಯವರೆಗೆ ಒಟ್ಟು 220 ಕೋಟಿ ರು. ಹಣವನ್ನು ಜಪ್ತಿ ಮಾಡಿದೆ. ಇದೇ ವೇಳೆ, 156 ಚೀಲಗಳಲ್ಲಿ ತುಂಬಿದ್ದ ಹಾಗೂ ಅಲ್ಮೇರಾಗಳಲ್ಲಿದ್ದ ಹಣದ ಎಣಿಕೆ ಮುಂದುವರಿದಿದ್ದು, ಎಣಿಕೆ ಪೂರ್ಣ ಆಗುವ ವೇಳೆಗೆ ನಗದಿನ ಮೌಲ್ಯ 400 ಕೋಟಿ ರು. ಆಗಬಹುದು ಎಂದು ಊಹಿಸಲಾಗಿದೆ.

ಇದೇ ವೇಳೆ, ಒಡಿಶಾದಲ್ಲಿ ಇಷ್ಟು ನಗದು ಜಪ್ತಿ ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳು ಬೋಲಂಗಿರ್‌ನಲ್ಲಿರುವ ಸಾಹು ಅವರಿಗೆ ಸೇರಿದ್ದ ಬಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನೀಸ್‌ ಮೇಲೆ ದಾಳಿ ನಡೆಸಿ ಗುರುವಾರ 200 ಕೋಟಿ ರು. ನಗದು ವಶಕ್ಕೆ ಪಡೆದಿದ್ದರು. ಶುಕ್ರವಾರ ಇನ್ನೂ 20 ಕೋಟಿ ರು. ನಗದು ಜಪ್ತಿ ಮಾಡಲಾಗಿದೆ.

‘ಬಲ್ಡಿಯೋ ಸಾಹು’ ಎಂಬುದು ಒಡಿಶಾದ ಅತಿ ದೊಡ್ಡ ಮದ್ಯ ತಯಾರಕ ಮತ್ತು ಮಾರಾಟ ಸಂಸ್ಥೆಯಾಗಿದೆ. ಇನ್ನು ಬೋಲಂಗಿರ್ ಜಿಲ್ಲೆಯ ಸುದಾಪಾಡಾದಲ್ಲಿ ಶುಕ್ರವಾರ ಮುಂದುವರೆದ ದಾಳಿ ವೇಳೆ ಹಣದ ಕಂತೆಗಳನ್ನು ತುಂಬಿಟ್ಟಿದ್ದ 156 ಚೀಲಗಳಲ್ಲಿದ್ದ ಹಣದ ಕಂತೆಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ 6 ರಿಂದ 7 ಚೀಲಗಳ ಹಣವನ್ನು ಎಣಿಕೆ ಮಾಡಲಾಗಿದ್ದು, ಅದರಲ್ಲಿದ್ದ 20 ಕೋಟಿ ರು. ಕಂಡು ಬಂದಿದೆ. ಇನ್ನೂ ಉಳಿದ ಚೀಲಗಳನ್ನು ಎಣಿಕೆ ಮಾಡಬೇಕಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಎಲ್ಲ ಚೀಲಗಳನ್ನೂ ಎಣಿಕೆ ಮಾಡಿದರೆ ಸುಮಾರು 400 ಕೋಟಿ ರು.ಗೂ ಅಧಿಕ ಹಣ ಸಿಗಬಹುದು ಎನ್ನಲಾಗಿದೆ.ಸಾಹು ಸಂಸ್ಥೆಯ ಸಂಬಲ್‌ಪುರ, ಬೋಲಂಗೀರ್, ತಿತಿಲಗಢ, ಬೌಧ್, ಸುಂದರ್‌ಗಢ, ರೂರ್ಕೆಲಾ ಮತ್ತು ಭುವನೇಶ್ವರದಲ್ಲಿ ದಾಳಿ ನಡೆಸಲಾಗಿದೆ. ಬುಧವಾರ ಸುಂದರಗಢ ನಗರದ ಸರ್ಗಿಪಾಲಿಯಲ್ಲಿರುವ ಕೆಲವು ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ರಾಜ್ಯದಲ್ಲಿ ಇಷ್ಟು ಹಣ ವಶ ಇದೇ ಮೊದಲು: ಇನ್ನು ‘ಇದು ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಇದುವರೆಗಿನ ಅತಿದೊಡ್ಡ ನಗದು ವಶವಾಗಿರಬಹುದು. ರಾಜ್ಯದಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ನಾನು ಎಂದಿಗೂ ಜಪ್ತಿ ಮಾಡಿಲ್ಲ’ ಎಂದು ಮಾಜಿ ಐಟಿ ಕಮಿಷನರ್ ಶರತ್ ಚಂದ್ರ ದಾಶ್ ಹೇಳಿದ್ದಾರೆ. ನೋಟು ಎಣಿಸಲು 8 ಯಂತ್ರ:ಇನ್ನು ಐಟಿ ವಶಪಡಿಸಿಕೊಂಡಿರುವ ಭಾರೀ ಮೊತ್ತದ ನೋಟುಗಳನ್ನು ಎಣಿಸಲು ಸುಮಾರು 8 ಯಂತ್ರಗಳನ್ನು ಬಳಸಲಾಗುತ್ತಿದೆ. ಇನ್ನೂ ಹೆಚ್ಚುವರಿ 2 ಯಂತ್ರಗಳನ್ನು ತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ನೋಟು ಎಣಿಕೆಯಲ್ಲಿ 30 ಬ್ಯಾಂಕ್‌ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಎಣಿಕೆ ಆಗದ 150 ಹಣದ ಬ್ಯಾಗ್‌ಗಳನ್ನು ಸ್ಟೇಟ್‌ ಬ್ಯಾಂಕ್‌ ಶಾಖೆಗೆ ಕೊಂಡೊಯ್ಯಲಾಗಿದೆ.