ಸಾರಾಂಶ
ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಇತ್ತೀಚೆಗೆ ಸತ್ಸಂಗದ ವೇಳೆ ನಡೆದ ಕಾಲ್ತುಳಿತದಲ್ಲಿ 121 ಭಕ್ತರು ಸಾವನ್ನಪ್ಪಿದ ಬೆನ್ನಲ್ಲೇ, ಭೋಲೇ ಬಾಬಾನ ಮತ್ತೊಂದು ನಿಗೂಢ ಕಥೆ ಬೆಳಕಿಗೆ ಬಂದಿದೆ.
ಲಖನೌ: ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಇತ್ತೀಚೆಗೆ ಸತ್ಸಂಗದ ವೇಳೆ ನಡೆದ ಕಾಲ್ತುಳಿತದಲ್ಲಿ 121 ಭಕ್ತರು ಸಾವನ್ನಪ್ಪಿದ ಬೆನ್ನಲ್ಲೇ, ಭೋಲೇ ಬಾಬಾನ ಮತ್ತೊಂದು ನಿಗೂಢ ಕಥೆ ಬೆಳಕಿಗೆ ಬಂದಿದೆ.
ಯಾರಿಂದಲೂ ದೇಣಿಗೆ ಸ್ವೀಕರಿಸದ ಬಾಬಾ 100 ಕೋಟಿ ರು.ಗೂ ಅಧಿಕ ಆಸ್ತಿ ಹೊಂದಿದ ಕುರಿತು ತನಿಖೆ ಆರಂಭವಾದ ಬೆನ್ನಲ್ಲೇ, ರಾಜಸ್ಥಾನದಲ್ಲಿ ಬಾಬಾ ಹೊಂದಿರುವ ಆಶ್ರಮವೊಂದಕ್ಕೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.ರಾಜಸ್ಥಾನದ ಆಲ್ವರ್‌ನ ಸಹಜ್‌ಪುರ್ ಎಂಬ ಹಳ್ಳಿಯಲ್ಲಿರುವ ಆಶ್ರಮಕ್ಕೆ ಮಹಿಳೆಯರಿಗಷ್ಟೇ ಪ್ರವೇಶಿಸಲು ಅನುಮತಿ ಇದೆ. 2010ರಿಂದ ನಡೆದು ಬರುತ್ತಿರುವ ಈ ನಿಯಮವನ್ನು ಉಲ್ಲಂಘಿಸಿ ಪುರುಷರು ಆಶ್ರಮ ಪ್ರವೇಶಕ್ಕೆ ಯತ್ನಿಸಿದರೆ ಬಾಬಾರ ಅನುಯಾಯಿಗಳಿಂದ ಥಳಿತಕ್ಕೆ ಒಳಗಾಗಬೇಕಾಗುತ್ತದೆ. ದುರಂತವೆಂದರೆ ಪುರುಷ ಭಕ್ತರು ಇದನ್ನೂ ಆಶೀರ್ವಾದವೆಂದೇ ತಿಳಿದು ಸುಮ್ಮನಾಗುತ್ತಾರೆ ಎಂದು ವರದಿಗಳು ತಿಳಿಸಿವೆ.
ಪಾದಧೂಳಿ ಸಂಗ್ರಹಿಸಲು ಬಾಬಾ ಕರೆಯೇ ಕಾಲ್ತುಳಿತಕ್ಕೆ ಕಾರಣ: ಸಾಕ್ಷಿಗಳುಲಖನೌ: ತಮ್ಮ ಪಾದಧೂಳಿ ಸಂಗ್ರಹಿಸಲು ಭೋಲೆ ಬಾಬಾ ನೀಡಿದ್ದ ಕರೆಯೇ ಕಾಲ್ತುಳಿತಕ್ಕೆ ಕಾರಣ ಎಂದು ಹಾಥ್ರಸ್ ಕಾಲ್ತುಳಿತ ದುರಂತದ ಕೆಲವು ಸಾಕ್ಷಿಗಳು ಹೇಳಿದ್ದಾರೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬ್ರಜೇಶ್ ಕುಮಾರ್ ಶ್ರೀವಾಸ್ತವ ನೇತೃತ್ವದ ಮೂವರು ಸದಸ್ಯರ ನ್ಯಾಯಾಂಗ ಆಯೋಗದ ಮುಂದೆ 34 ಸಾಕ್ಷಿಗಳು ಹಾಜರಾಗಿ ಹೇಳಿಕೆ ನೀಡಿ, ಭೋಲೆ ಬಾಬಾ ಅವರು ‘ನಿಮ್ಮ ಎಲ್ಲಾ ಕಾಯಿಲೆಗಳು ಗುಣ ಆಗಬೇಕು ಎಂದರೆ ನನ್ನ ಪಾದಧೂಳಿ ಸಂಗ್ರಹಿಸಿ’ ಎಂದು ಭಕ್ತರಿಗೆ ಕರೆ ನೀಡಿದರು. ಆಗ ಜನರು ಪಾದಧೂಳಿ ಸಂಗ್ರಹಿಸಲು ಮುಗಿಬಿದ್ದರು. ಇದು ಕಾಲ್ತುಳಿತಕ್ಕೆ ನಾಂದಿ ಹಾಡಿತು’ ಎಂದಿದ್ದಾರೆ.